×
Ad

ಸಿಆರ್‌ಝಡ್ ಮರಳುಗಾರಿಕೆ; ಹೈಕೋರ್ಟ್ ತೀರ್ಪಿಗೆ ಶಂಕರ ಪೂಜಾರಿ ಸ್ವಾಗತ

Update: 2019-03-29 22:03 IST

ಉಡುಪಿ, ಮಾ.29: ದಕ್ಷಿಣ ಕನ್ನಡ ಜಿಲ್ಲೆಯ ಪ್ರಕರಣ ಒಂದಕ್ಕೆ ಸಂಬಂಧಿಸಿ ದಂತೆ ಸಿಆರ್‌ಝಡ್ ವಲಯದಲ್ಲಿ 2011ನೇ ಸಾಲಿನ ಮಾನದಂಡದಂತೆ ಮರಳು ದಿಬ್ಬ ತೆರವುಗೊಳಿಸುವುದಕ್ಕೆ ಪರವಾನಿಗೆ ನೀಡಲು ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಲ್ಲಿನ ಮರಳು ಕಾರ್ಯಪಡೆ ಸಮಿತಿ 2018ರಲ್ಲಿ ಕೈಗೊಂಡ ನಿರ್ಧಾರವನ್ನು ಎತ್ತಿ ಹಿಡಿದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಉಡುಪಿ ಜಿಪಂನ ಮಾಜಿ ಅಧ್ಯಕ್ಷ ಕಟಾಡಿ ಶಂಕರ ಪೂಜಾರಿ ಸ್ವಾಗತಿಸಿದ್ದಾರೆ.

ಸಿಆರ್‌ಝಡ್ ವಲಯಗಳಲ್ಲಿ ನೀರಿನ ಸರಾಗ ಹರಿಯುಕೆಗಾಗಿ ಸ್ಥಳೀಯ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ 53 ಕುಟುಂಬಗಳಿಗೆ 2011-12 ರಲ್ಲಿ ಪರವಾನಿಗೆ ನೀಡಲಾಗಿತ್ತು. ಅದೇ ಮಾನದಂಡ ಅನುಸರಿಸಿ 2018ರಲ್ಲಿ ಜಿಲ್ಲಾಡಳಿತ ಮತ್ತೆ ನಿರ್ಣಯ ಅಂಗೀಕರಿಸಿದ್ದರ ವಿರುದ್ಧ ಖಾಸಗಿಯವರು ಹೂಡಿದ ದಾವೆಯನ್ನು ಹೈಕೋರ್ಟು ವಜಾಗೊಳಿಸಿದೆ. ಸಾಂಪ್ರದಾಯಿಕ ಮರಳುಗಾರಿಕೆಯ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಕಟಪಾಡಿ ಶಂಕರ ಪೂಜಾರಿ ತಿಳಿಸಿದ್ದಾರೆ.

ಹೈಕೋರ್ಟಿನ ತೀರ್ಪಿನ ಆಧಾರದಲ್ಲಿ ಉಡುಪಿ ಜಿಲ್ಲಾಡಳಿತವೂ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಮರಳುಗಾರಿಕೆ ಸ್ಥಗಿತಗೊಂಡು ಕಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಮರಳು ಎತ್ತುವವರು, ಲಾರಿ, ಟೆಂಪೋ ಹೊಂದಿದವರು ಮತ್ತು ಸರಕಾರಿ ಹಾಗೂ ಖಾಸಗಿ ಮನೆಗಳನ್ನು ಕಟ್ಟಿಕೊಳ್ಳುವ ಜನರಿಗೆ ಮುಕ್ತಿ ಸಿಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಎಂದು ಪೂಜಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News