×
Ad

ಉಡುಪಿ ಜಿಲ್ಲಾ ಚುನಾವಣಾಧಿಕಾರಿಗೆ ದೂರು

Update: 2019-03-29 22:10 IST

ಉಡುಪಿ, ಮಾ.29: ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಚುನಾವಣಾ ಪ್ಲಯಿಂಗ್ ಸ್ಕ್ವಾಡ್ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಮತ್ತು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.

ಮಾ.26ರಂದು ರಾತ್ರಿ 8:30ರ ಸುಮಾರಿಗೆ ಸಾಬ್ರಕಟ್ಟೆ ಸನ್ನದಿಗೆ ಚುನಾವಣಾ ಫ್ಲಯಿಂಗ್ ಸ್ಕ್ವಾಡ್ ತಂಡ ಮೂರರ ಅಧಿಕಾರಿ ಮಧು ಎನ್.ಎಂ. ಬಂದು ತಪಾಸಣೆ ಪ್ರಾರಂಭಿಸಿದಾಗ, ಬಂದ ಮಾಹಿತಿಯಂತೆ ಅಧ್ಯಕ್ಷರು ಸ್ಥಳಕ್ಕೆ ಹೋಗಿದ್ದಾರೆ. ಅಬಕಾರಿ ಇಲಾಖಾ ಸಿಬ್ಬಂದಿಗಳಿಲ್ಲದೇ ಪ್ಲಯಿಂಗ್ ಸ್ಕ್ವಾಡ್‌ಗೆ ಸನ್ನದು ತಪಾಣೆಗೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದ ಪ್ರಶ್ನಿಸಲಾಗಿತ್ತು. ಇದೆ ಎಂದು ಉತ್ತರಿಸಿದ ಅದಿಕಾರಿ ಆದೇಶವನ್ನು ಕೇಳಿದರೂ ಕೊಡಲಿಲ್ಲ ಎಂದು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಸ್ಕ್ವಾಡ್‌ಗೆ ತಪಾಸಣೆ ನಡೆಸಲು ಅಧಿಕಾರವಿಲ್ಲ ಎಂದಿದ್ದಾರೆ. ಪ್ರಕರಣದ ಬಗ್ಗೆ ಮರುದಿನ ಮಾ.27ರಂದು ಪ್ಲಯಿಂಗ್ ಸ್ಕ್ವಾಡ್, ಘಟನೆಯನ್ನು ತಿರುಚಿ ಸುಳ್ಳು ದೂರನ್ನು ಜಿಲ್ಲಾಧ್ಯಕ್ಷರ ವಿರುದ್ಧ ನೀಡಿದ್ದಾರೆ. ಅಲ್ಲದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಾ.26ರ ಘಟನೆಯ ಕುರಿತು ಜಿಲ್ಲಾಧ್ಯಕ್ಷರು ಮಾ.27ರ ಬೆಳಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಲಿಖಿತ ದೂರನ್ನು ನೀಡಿದ್ದಾರೆ. ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ, ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯಾಚರಿಸುತ್ತಿರುವ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News