×
Ad

ಎ.1ರಿಂದ ಆಗುಂಬೆ ಘಾಟ್ ಬಂದ್: ಪರ್ಯಾಯ ಮಾರ್ಗ

Update: 2019-03-30 20:08 IST

ಉಡುಪಿ, ಮಾ. 30: ಮಲ್ಪೆಯಿಂದ ತೀರ್ಥಹಳ್ಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-169ಎ ಮಾರ್ಗದ ಆಗುಂಬೆ ಘಾಟ್ ಭಾಗವನ್ನು ಶಾಶ್ವತ ದುರಸ್ಥಿಗೊಳಿಸಲು ಎ.1ರಿಂದ 30ರವರೆಗೆ ಘಾಟ್ ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ಆದೇಶಿಸಲಾಗಿದೆ.

ಈ ಅವಧಿಯಲ್ಲಿ ಸಂಚರಿಸುವ ಲಘು ವಾಹನಗಳಾದ ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್, ಎಲ್‌ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು, ಉಡುಪಿ- ಕಾರ್ಕಳ-ಮಾಳಾಘಾಟ್- ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169) ಮಾರ್ಗದಲ್ಲಿ ಸಂಚರಿಸುವಂತೆ ಹಾಗೂ ಭಾರೀ ವಾಹನಗಳಾದ ರಾಜಹಂಸ, ಐರಾವತ ಬಸ್‌ಗಳು, ಖಾಸಗಿ ಲಕ್ಸುರಿ ಬಸ್ಸುಗಳು, ಬುಲೆಟ್ ಟ್ಯಾಂಕರ್ಸ್‌, ಷಿಪ್ ಕಾರ್ಗೋ ಕಂಟೈನರ್ಸ್‌ ಮತ್ತು ಲಾಂಗ್ ಚಾಸೀಸ್‌ನ ವಾಹನಗಳು ಉಡುಪಿ- ಕುಂದಾಪುರ- ಸಿದ್ಧಾಪುರ- ಹೊಸಂಗಡಿ- ಮಾಸ್ತಿಕಟ್ಟೆ- ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗದಲ್ಲಿ ಸಂಚರಿಸುವಂತೆ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

ಕಾಮಗಾರಿ ನಡೆಯುವ ವೇಳೆ ನಿಷೇಧಿತ ಮಾರ್ಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ಮತ್ತು ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ, ಘಾಟಿ ರಸ್ತೆಯ ದುರಸ್ಥಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಸಮರೋಪಾದಿಯಲ್ಲಿ ಎ.1ರಿಂದ ಘಾಟಿ ರಸ್ತೆಯ ದುರಸ್ಥಿಕಾರ್ಯವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಪರಿಷ್ಕೃತ ಅಧಿಸೂಚನೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News