×
Ad

ಕೋಟ ಜೋಡಿ ಕೊಲೆ ಪ್ರಕರಣ: ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

Update: 2019-03-30 20:30 IST

ಕುಂದಾಪುರ, ಮಾ. 30: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಚಿಕ್ಕನಕೆರೆಯ ಯುವಕರ ಜೋಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿ ಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ ಶನಿವಾರ ಆದೇಶ ನೀಡಿದೆ.

ಪ್ರಕರಣದ ಆರೋಪಿಗಳಾದ ಹರೀಶ್ ರೆಡ್ಡಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ ಹಾಗೂ ಮಹೇಶ್ ಗಾಣಿಗ, ರವಿಚಂದ್ರ ಎಂಬವರಿಗೆ ಜಾಮೀನು ನೀಡುವಂತೆ ಆರೋಪಿ ಪರ ವಕೀಲರು ಕಳೆದ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಮಾ.27ರಂದು ಆರೋಪಿ ಪರ ವಕೀಲರ ಹಾಗೂ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಅವರ ವಾದ ಪ್ರತಿವಾದವನ್ನು ಮಂಡಿಸಿದ್ದರು. ಈ ಕುರಿತ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ 6 ಮಂದಿ ಆರೋಪಿಗಳ ಜಾಮೀನು ಅರ್ಜಿಯ್ನು ವಜಾ ಗೊಳಿಸಿ ಆದೇಶ ನೀಡಿದರು.

ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಆರೋಪಿಗಳಾದ ಪೊಲೀಸ್ ಸಿಬಂದಿ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ವಿದ್ಯಾರ್ಥಿ ಪ್ರಣವ್ ರಾವ್ ಅವರ ಜಾಮೀನು ಅರ್ಜಿಯನ್ನು ಕುಂದಾಪುರ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಲಯವು ಫೆ.19ರಂದು ತಿರಸ್ಕರಿಸಿತ್ತು.

ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ಜ.26ರಂದು ದುಷ್ಕರ್ಮಿಗಳು ಕೊಲೆಗೈದಿದ್ದು, ಈ ಸಂಬಂಧ ಒಟ್ಟು 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಇವರೆಲ್ಲರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News