ಮಲ್ಪೆ: ಬಾನಂಗಳದಲ್ಲಿ ಮತದಾನದ ಸಂದೇಶ ಸಾರಿದ ಗಾಳಿಪಟಗಳು

Update: 2019-03-30 16:20 GMT

 ಮಲ್ಪೆ, ಮಾ. 30: ಶನಿವಾರ ಸಂಜೆಯ ವೇಳೆಯಲ್ಲಿ ಮಲ್ಪೆಕಡಲತೀರದಲ್ಲಿ ವಿಹರಿಸಲು ಬಂದವರಿಗೆ ಆಶ್ಚರ್ಯ ಕಾದಿತ್ತು. ಕಡಲತೀರದಲ್ಲಿ ವಿಕಲ ಚೇತನರ ಬೈಕ್ ರ್ಯಾಲಿ, ಅಂಗವಿಕಲ ಮಕ್ಕಳ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ, ಕತ್ತೆತ್ತಿ ಮೇಲೆ ನೋಡಿದರೆ ಬಾನಂಗಳದ ತುಂಬೆಲ್ಲಾ ಮತದಾನ ಸಂದೇಶ ಸಾರುವ ವಿವಿಧ ಬಣ್ಮಗಳ ಅತ್ಯಾಕರ್ಷಕ ಗಾಳಿಪಟಗಳ ಹಾರಾಟ.

ಉಡುಪಿ ಜಿಲ್ಲಾ ಸ್ವೀಪ್ ಸಮಿತಿ, ಮಲ್ಪೆಬೀಚ್ ಅಭಿವೃಧ್ದಿ ಸಮಿತಿ ಸಹಯೋಗದಲ್ಲಿ ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ನಡೆಸಿದ ಮತದಾನ ಕುರಿತು ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮ ಇದಾಗಿತ್ತು. ಇದು ವಿಹಾರಕ್ಕೆ ಬಂದ ಸ್ಥಳೀಯರೊಂದಿಗೆ ನಾಡಿನ ನಾನಾಭಾಗಗಳಿಂದ ಬಂದಿದ್ದ ಪ್ರವಾಸಿಗರಲ್ಲೂ ಮತದಾನದ ಕುರಿತಂತೆ ಜಾಗೃತಿ ಮೂಡಿಸಲು ಯಶಸ್ವಿಯಾದವು.

ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ವಿಕಲಚೇತನರು, ಮತದಾನ ಜಾಗೃತಿ ಮೂಡಿಸುವ ಪ್ರದರ್ಶನ ಫಲಕಗಳನ್ನು ತಮ್ಮ ದ್ವಿಚಕ್ರ ವಾಹನಗಳಿಗೆ ಅಳವಡಿಸಿ ಕೊಂಡು ಮಲ್ಪೆಯಲ್ಲಿ ಮತದಾನ ಜಾಗೃತಿ ಮೂಡಿಸುವುದರ ಜೊತೆಗೆ, ಮತದಾನ ಮಾಡುವುದು ನಮ್ಮ ಸಿದ್ದ ಹಕ್ಕು, ಎ.18 ಮತ್ತು 23ರಂದು ಮರೆಯದೇ ಮತದಾನ ಮಾಡಿ ಮುಂತಾದ ಸಂದೇಶಗಳಿದ್ದ ತಮಗಾಗಿ ಸಿದ್ದ ಪಡಿಸಿದ ಗಾಳಿಪಟಗಳನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಮತದಾನದ ಸಂದೇಶಗಳನ್ನು ಸಾರಿದರು.

ಇವರೊಂದಿಗೆ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಮುಂತಾದ ಕಡೆ ಗಳಿಂದ ಬಂದಿದ್ದ ವೃತ್ತಿಪರ ಗಾಳಿಪಟ ಹಾರಿಸುವವರು, ಟೆಡ್ಡಿಬೇರ್, ಡ್ರಾಗನ್, ರಿಂಗ್, ಸಿಂಗಲ್ ನೋಟ್, ಪೈಪ್‌ಲೈನ್ ಹಾಗೂ ರಾತ್ರಿ ವೇಳೆಯಲ್ಲಿ ಫಳಫಳ ಹೊಳೆಯುವಂತೆ ಕಾಣುವ ಎಲ್‌ಇಡಿ ಗಾಳಿಪಟ ಸೇರಿದಂತೆ ವಿವಿಧ ಆಕಾರದ, ವರ್ಣ ವೈವಿಧ್ಯತೆಯ ಗಾಳಿಪಟಗಳಲ್ಲಿ ಮತದಾನದ ಸಂದೇಶ ರಚಿಸಿ, ನೋಡುಗರಲ್ಲಿ ಜಾಗೃತಿ ಮೂಡಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಸಿಇಓ ಸಿಂದೂ ಬಿ. ರೂಪೇಶ್ ಗಾಳಿಪಟ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರವಿವಾರ ಸಂಜೆ ಕೂಡಾ ಇಲ್ಲಿ ಗಾಳಿಪಟಗಳ ಹಾರಾಟ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News