ಜರ್ಮನಿಯಲ್ಲಿ ಕುಂದಾಪುರ ಮೂಲದ ದಂಪತಿಗೆ ಚೂರಿ ಇರಿತ: ಪತಿ ಮೃತ್ಯು, ಪತ್ನಿ ಗಂಭೀರ

Update: 2019-03-30 16:59 GMT

ಕುಂದಾಪುರ, ಮಾ. 30: ಜರ್ಮನಿಯ ಮ್ಯೂನಿಚ್ ನಗರದಲ್ಲಿ ಅಪರಿಚಿತನೊಬ್ಬ ನಡೆಸಿದ ಚೂರಿ ಇರಿತಕ್ಕೆ ಕುಂದಾಪುರ ಮೂಲದ ಬಿ.ವಿ. ಪ್ರಶಾಂತ (51) ಎಂಬವರು ಬಲಿಯಾಗಿದ್ದು, ಅವರ ಪತ್ನಿ ಸ್ಮಿತಾ (40) ಗಂಭೀರ ವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಮಾ.29ರಂದು ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿ ಮೇಲೆ ಎರಗಿ ಚೂರಿಯಿಂದ ಇರಿದಿದ್ದು, ಇದರಿಂದ ಪ್ರಶಾಂತ್ ಮೃತಪಟ್ಟು, ಸ್ಮಿತಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾ.30ರಂದು ನಸುಕಿನ ವೇಳೆ ಕುಂದಾಪುರ ತಾಲೂಕಿನ ಸಿದ್ಧಾಪುರ ತಾಲೂಕಿನಲ್ಲಿರುವ ಸ್ಮಿತಾ ಮನೆಯವರಿಗೆ ಮಾಹಿತಿ ಬಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಪ್ರಶಾಂತ್ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ದಿ.ಬಿ.ಎನ್. ವೆಂಕಟರಮಣ ಹಾಗೂ ವಿನಯ ಎಂಬವರ ಪುತ್ರರಾಗಿದ್ದಾರೆ. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ ಬಸ್ರೂರಿನವರಾಗಿದ್ದು, ಸದ್ಯ ಇವರ ಕುಟುಂಬ ಸಾಗರದಲ್ಲಿ ನೆಲೆಸಿದೆ.

ಸ್ಮಿತಾ ಅವರ ತಂದೆ ತಾಯಿ ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ನೆಲೆಸಿದ್ದು, ತಂದೆ ಡಾ. ಚಂದ್ರಮೌಳಿ ಸಿದ್ಧಾಪುರ ಪೇಟೆಯಲ್ಲಿ ಆಯುರ್ವೇದಿಕ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಾಲ್ವರು ಮಕ್ಕಳು ದುಬೈ, ಜರ್ಮನಿ, ಅಮೆರಿಕಾ ಹಾಗೂ ಸುಜಯ್ ಎಂಬವರು ಊರಿನಲ್ಲಿ ನೆಲೆಸಿದ್ದಾರೆ.

22 ವರ್ಷಗಳ ಹಿಂದೆ ವಿವಾಹ: ಪ್ರಶಾಂತ ಹಾಗೂ ಸ್ಮಿತಾ 22 ವರ್ಷ ಗಳ ಹಿಂದೆ ವಿವಾಹವಾಗಿದ್ದು, ಕಳೆದ 18 ವರ್ಷಗಳಿಂದ ದಂಪತಿ ಮಕ್ಕಳು ಸಹಿತ ಜರ್ಮನಿಯಲ್ಲಿ ವಾಸವಾಗಿದ್ದಾರೆ. ಸದ್ಯ ಅವರು ಜರ್ಮನಿಯ ನಾಗರಿಕರೂ ಕೂಡ ಆಗಿದ್ದಾರೆ ಎಂದು ಸ್ಮಿತಾ ಸಹೋದರ ಸುಜಯ್ ತಿಳಿಸಿದ್ದಾರೆ.

ಡಿಪ್ಲೊಮಾ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಪ್ರಶಾಂತ್ ಜರ್ಮನಿ ಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದರು. ಪತ್ನಿ ಸ್ಮಿತಾ ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ವಿವಿಯಲ್ಲಿ ಎಂಎ ಪದವಿಯನ್ನು ಪಡೆದಿದ್ದರು. ಸದ್ಯ ಅವರು ಜರ್ಮನಿಯಲ್ಲಿ ಗೃಹಿಣಿಯಾಗಿ ದ್ದಾರೆ. ಇವರ ಮಗಳು ಸಾಕ್ಷೀ (15) ಹಾಗೂ ಮಗ ಶ್ಲೋಕ್ (10) ಇವರ ಜೊತೆಯಲ್ಲಿ ವಾಸವಾಗಿದ್ದಾರೆ.

ಡಾ. ಚಂದ್ರಮೌಳಿ ಕೆಲವು ತಿಂಗಳ ಹಿಂದೆ ತನ್ನ ಮಕ್ಕಳನ್ನು ಕಾಣಲು ದುಬೈ, ಅಮೆರಿಕಾ ಹಾಗೂ ಸ್ಮಿತಾ ಇರುವ ಜರ್ಮನಿಗೂ ಹೋಗಿ ಬಂದಿದ್ದರು. ಒಂದು ವರ್ಷದ ಹಿಂದೆ ಪ್ರಶಾಂತ್, ಸ್ಮಿತಾ ಹಾಗೂ ಮಕ್ಕಳು ಊರಿಗೆ ಬಂದು ಹೋಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ನೀರವ ಮೌನ: ಈ ಘಟನೆಯಿಂದ ಸ್ಮಿತಾ ಅವರ ಕುಟುಂಬ ದವರು ಆತಂಕಕ್ಕೆ ಒಳಗಾಗಿದ್ದು, ಸಿದ್ಧಾಪುರದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ಇದೀಗ ಮನೆ ಮಗಳನ್ನು ನೋಡಲು ಈಗಾಗಲೇ ಪಾಸ್‌ಪೋರ್ಟ್ ಹೊಂದಿರುವ ತಂದೆ ಚಂದ್ರಮೌಳಿ ಹಾಗೂ ಸಹೋದರ ಸುಜಯ್ ಜರ್ಮನಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂಬಂಧ ಭಾರತ ಸರಕಾರ ಕೂಡ ಇವರ ಸಂಪರ್ಕದಲ್ಲಿ ಇದೆ.

ಸ್ಮಿತಾ ಅವರ ತಾಯಿ ಬಳಿ ಪಾಸ್‌ಪೋರ್ಟ್ ಇಲ್ಲ ಎಂಬ ವಿಚಾರ ತಿಳಿದು ಬಂದಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಒಟ್ಟಾರೆ ಇಡೀ ಕುಟುಂಬ ಜರ್ಮನಿಗೆ ತೆರಳುವ ಸಾಧ್ಯತೆಗಳಿವೆ ಎಂದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಸೂಚನೆ ಮೇರೆಗೆ ಸ್ಥಳೀಯ ಶಂಕರನಾರಾಯಣ ಪೊಲೀಸರು ಸ್ಮಿತಾ ಕುಟುಂಬದವರನ್ನು ಭೇಟಿಯಾಗಿದ್ದಾರೆ.

‘ಈ ಘಟನೆ ಬಗ್ಗೆ ನಿನ್ನೆ ರಾತ್ರಿ ನಮಗೆ ಕರೆ ಬಂದಿದೆ. ಅದರ ನಂತರ ಭಾರತ ಹಾಗೂ ಜರ್ಮನ್ ಸರಕಾರ ನಿರಂತರ ನನ್ನ ಸಂಪರ್ಕದಲ್ಲಿದೆ. ನಮ್ಮನ್ನು ಕಳುಹಿಸಿ ಕೊಡುವ ಬಗ್ಗೆ ಭಾರತ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ನಾನು, ತಂದೆ ಮತ್ತು ತಾಯಿ ಹೋಗುವ ಉದ್ದೇಶ ಇಟ್ಟುಕೊಂಡಿದ್ದೇವೆ. ಸದ್ಯ ಬೇರೆ ಯಾವುದೇ ಮಾಹಿತಿ ನಮಗೆ ಇಲ್ಲ’
-ಸುಜಯ್, ಸ್ಮಿತಾ ಸಹೋದರ

ಸಿದ್ಧಾಪುರದಲ್ಲಿರುವ ಸ್ಮಿತಾ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಸ್ಮಿತಾ ತಂದೆ, ತಾಯಿ ಮತ್ತು ಸಹೋದರ ಜರ್ಮನಿಗೆ ತೆರಳುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ತಂದೆ ಮತ್ತು ಸಹೋದರನಲ್ಲಿ ಪಾಸ್‌ಪೋರ್ಟ್ ಇದ್ದು, ತಾಯಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಬಂದಿದೆ. ತಾಯಿ ಕೂಡ ಹೋಗುವುದಾದರೆ ನವೀಕರಣ ಕಾರ್ಯವನ್ನು ಕೂಡಲೇ ಮಾಡಿಕೊಡುತ್ತೇವೆ. ಘಟನೆ ಸಂಬಂಧ ಭಾರತ ಸರಕಾರದಿಂದ ನಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ.
-ನಿಶಾ ಜೇಮ್ಸ್, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ.

ಸಚಿವೆ ಸುಷ್ಮಾ ಸ್ವರಾಜ್‌ರಿಂದ ಟ್ವಿಟ್

ಈ ಘಟನೆಯ ಕುರಿತಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಬೆಳಗ್ಗೆ 10:45ಕ್ಕೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ‘ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರತೀಯ ದಂಪತಿ ಪ್ರಶಾಂತ್ ಮತ್ತು ಸ್ಮಿತಾ ಬಸರೂರು ಎಂಬವರಿಗೆ ಅಪರಿಚಿತ ವಲಸಿಗನೊಬ್ಬ ಚೂರಿಯಿಂದ ಇರಿದಿದ್ದು, ದುರದೃಷ್ಟವಶಾತ್ ಇದರಿಂದ ಪ್ರಶಾಂತ್ ಮೃತಪಟ್ಟಿದ್ದು, ಸ್ಮಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತಿದ್ದಾರೆ. ಪ್ರಶಾಂತ್ ಅವರ ಸಹೋದರನನ್ನು ಜರ್ಮನಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಮೃತರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು’ ಎಂದವರು ಟ್ವಿಟ್ ಮಾಡಿದ್ದರು.

ಕೆಲಹೊತ್ತಿನ ಬಳಿಕ ಇನ್ನೊಂದು ಟ್ವಿಟ್‌ನಲ್ಲಿ ದಂಪತಿಗಳ ಇಬ್ಬರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಜರ್ಮನ್ ಭಾರತೀಯ ರಾಯಭಾರ ಕಚೇರಿಗೆ ತಿಳಿಸಲಾಗಿದೆ ಎಂದವರು ಟ್ವಿಟ್ ಮಾಡಿದ್ದರು. ಇದಕ್ಕೆ ಪ್ರಾಂಕ್‌ಫರ್ಟ್‌ನಿಂದ ಭಾರತೀಯರೊಬ್ಬರು ಟ್ವಿಟ್ ಮಾಡಿ, ಕುಟುಂಬಿಕರು ಬರುವವರೆಗೆ ತಾವು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News