×
Ad

ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ವಶಕ್ಕೆ

Update: 2019-03-30 22:12 IST

ಉಡುಪಿ, ಮಾ.30: ಮೂಡುಸಗ್ರಿ ರೈಲ್ವೆ ಹಳಿಯ ಸಮೀಪದ ಹಾಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿರುವ ಬಗ್ಗೆ ಮೂಲಗಳು ತಿಳಿಸಿವೆ.

ಆರೋಪಿಯನ್ನು ಬಾದಾಮಿ ಮೂಲದ ಕೂಲಿ ಕಾರ್ಮಿಕ ಹನುಮಂತಪ್ಪ (40) ಎಂದು ಗುರುತಿಸಲಾಗಿದ್ದು, ಈತ ಕಾಪುವಿನಲ್ಲಿ ವಾಸವಾಗಿದ್ದು, ಕೃತ್ಯ ಎಸಗಿದ ಬಳಿಕ ಬಾದಾಮಿಯಲ್ಲಿ ತಲೆಮರೆಸಿಕೊಂಡಿದ್ದನು. ನಗರದ ಕೆಲವು ಅಂಗಡಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದರು.

ಈ ಬಗ್ಗೆ ಖಚಿತ ಮಾಹಿತಿಯಂತೆ ಆರೋಪಿಯನ್ನು ಬಾದಾಮಿಯಲ್ಲಿ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತನನ್ನು ಉಡುಪಿಗೆ ಕರೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾದಾಮಿ ಮೂಲದ ನಿಟ್ಟೂರಿನ 17ವರ್ಷ ವಯಸ್ಸಿನ ಬಾಲಕಿಯನ್ನು ಮಾ.9ರಂದು ಮೂಡುಸಗ್ರಿಯ ಹಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಮಾ.10ರಂದು ಸಂಜೆ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News