ಪಿಪಿಸಿ ಕಾಲೇಜಿನಲ್ಲಿ ಡಾ.ಬಿ.ವಸಂತ ಶೆಟ್ಟಿ ಸಂಸ್ಮರಣೆ
ಉಡುಪಿ, ಮಾ. 30: ನಾಡಿನ ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ವಸಂತ ಶೆಟ್ಟಿ ಅವರ ಸಂಸ್ಮರಣೆ ಮತ್ತು ಇತಿಹಾಸದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ವೌಖಿಕ ಹಾಗೂ ಬರಹಗಳ ರೂಪದಲ್ಲಿ ಇತಿಹಾಸದ ವಿಚಾರಗಳು ನಮಗೆ ಲಭಿಸುತ್ತವೆ. ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂಬ ಸಂದೇಶ ಇತಿಹಾಸದಲ್ಲಿ ಅಡಗಿದೆ ಎಂದರು.
ಖ್ಯಾತ ಶಾಸನತಜ್ಞ ಡಾ.ವಸಂತ ಶೆಟ್ಟಿ ಉಡುಪಿ ಜಿಲ್ಲೆಯ ಅನೇಕ ಶಾಸನಗಳನ್ನು ಅಧ್ಯಯನ ಮಾಡಿ ನಮ್ಮ ಜಿಲ್ಲೆಯ ಇತಿಹಾಸವನ್ನು ಜನಸಾಮಾನ್ಯರಿಗೂ ತಲುಪಿಸಿದ್ದಾರೆ ಎಂದು ಸ್ವಾಮೀಜಿ ನುಡಿದರು.
ಖ್ಯಾತ ಇತಿಹಾಸ ಸಂಶೋಧಕರಾದ ಡಾ.ಪಿ.ಗಣಪತಿ ಭಟ್ ಹಾಗೂ ಡಾ. ಎಸ್.ಜಿ. ಸಾಮಕ್ ವೌಖಿಕ ಕಥನ ಮತ್ತು ತುಳು ಇತಿಹಾಸ ಹಾಗೂ ಕನಕದಾಸರ ಹುಟ್ಟೂರು ಬಾಡದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ ದರು. ಕಾಲೇಜಿನ ಪ್ರಾಂಶುಪಾಲ ಹಾಗೂ ವಸಂತ ಶೆಟ್ಟಿ ಅವರ ಸಹೋದರ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಚಂದ್ರಕಾಂತ್ ಭಟ್ ವಂದಿಸಿದರು. ವಿದ್ಯಾರ್ಥಿನಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.