ಎ. 1: ಪತ್ರಿಕಾಭವನದಲ್ಲಿ ಮೀಡಿಯಾ ಹೆಲ್ತ್ ಕ್ಲಿನಿಕ್ ಉದ್ಘಾಟನೆ
ಮಂಗಳೂರು, ಮಾ. 30: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರ ಅರೋಗ್ಯ ತಪಾಸಣೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ಆರಂಭಿಸಲಾಗುತ್ತಿರುವ ‘ಮೀಡಿಯಾ ಹೆಲ್ತ್ ಕ್ಲಿನಿಕ್’ನ ಉದ್ಘಾಟನೆಯು ಎಪ್ರಿಲ್ 1ರಂದು ಪೂರ್ವಾಹ್ನ 11ಗಂಟೆಗೆ ನಡೆಯಲಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ ಭಾಗವಹಿಸಲಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೆನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು.
ಮೇಯಿಂದ ಪ್ರತೀ ತಿಂಗಳ ಎರಡನೇ ಮಂಗಳವಾರ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅರೋಗ್ಯ ತಪಾಸಣೆ ನಡೆಯಲಿದೆ. ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಇಬ್ಬರು ನುರಿತ ವೈದ್ಯರು (ಒಬ್ಬ ವೈದ್ಯೆ), 3 ಮಂದಿ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆ ಸಹಿತ ವಿವಿಧ ವೈದ್ಯಕೀಯ ಸೌಲಭ್ಯ ದೊರೆಯಲಿದೆ.
ವೈದ್ಯಕೀಯ ತಪಾಸಣೆಗೆ ಬರುವ ಪತ್ರಕರ್ತರು ಒಂದು ದಿನ ಮುಂಚಿತವಾಗಿ ಹೆಸರನ್ನು ಪ್ರೆಸ್‌ಕ್ಲಬ್ ನ ಮ್ಯಾನೇಜರ್ ಅಭಿಷೇಕ್ (ಮಂಗಳೂರು ಪ್ರೆಸ್‌ಕ್ಲಬ್ ಸಂಪರ್ಕ ಸಂಖ್ಯೆ: 0824-2450111) ಅವರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.