ತೊಕ್ಕೊಟ್ಟು: ಬಿಜೆಪಿ ಕಾರ್ಯಕರ್ತರ ಸಮಾವೇಶ
ಕೊಣಾಜೆ: ಈ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕಾದರೆ ಅದು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದು ಜನಾರ್ದನ ಪೂಜಾರಿ, ದೇಶದ ಭದ್ರತೆಯನ್ನು ಕಾಪಾಡಲು ಸಮರ್ಥ ನಾಯಕ ನರೇಂದ್ರ ಮೋದಿಯವರೇ ಮುಂದಿನ ಎರಡು ಅವಧಿಗೆ ಪ್ರಧಾನ ಮಂತ್ರಿ ಆಗಬೇಕು ಎಂದು ಮುಲಾಯಂ ಸಿಂಗ್ ಯಾದವ್, ಅಭಿನಂದನ್ ನಂತಹ ಸೈನಿಕನನ್ನು ಪಾಕಿಸ್ತಾನದ ಕೋಟೆಯಿಂದ ಬಿಡಿಸಿ ಹೊರಗೆ ತರುವಂಥ ಧೈರ್ಯವನ್ನು ಮಾಡಿದ್ದು ನರೇಂದ್ರ ಮೋದಿ ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಶೀಲಾ ದೀಕ್ಷಿತ್ ಹೇಳಿದ್ದು ಈ ದೇಶದ ಕೋಟಿ ಕೋಟಿ ಜನತೆ ಮೋದಿಯವರೇ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿ ಆಗಬೇಕು ಎಂದು ಹೇಳಬೇಕಾದರೆ ಮೋದಿಯವರು ಮತ್ತೆ ಆಧಿಕಾರ ನಡೆಸುವುದು ಖಂಡಿತ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ತೊಕ್ಕೊಟ್ಟು ಕಾಪಿಕಾಡ್ ನ ಗಟ್ಟಿ ಸಮಾಜಭವನದಲ್ಲಿ ಶನಿವಾರ ನಡೆದ ಪೇಜ್ ಪ್ರಮುಖ್, ಫಲಾನುಭವಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನು ಉದ್ದೇಶಿಸಿ ಮಾತನಾ ಡುತ್ತಾ ಈ ದೇಶದ ಲೂಟಿಕೋರರನ್ನು ನಡುಬೀದಿಯಲ್ಲಿ ನಿಲ್ಲಿಸುತ್ತೇನೆ ಎಂದು ಸಾರಿದ್ದರು. ಅದರಂತೆ ಐಟಿ ದಾಳಿಯಾದಾಗ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಐಟಿ ದಾಳಿಯನ್ನು ವಿರೋಧಿಸಿ ರಸ್ತೆಯಲ್ಲಿ ನಿಂತು ಪ್ರತಿಭಟಿಸಿದ್ದಾರೆ. ಅದರಿಂದ ಲೂಟಿಕೋರರು ರಸ್ತೆಗೆ ಬಂದಂತಾಗಿದೆ ಎಂದು ನುಡಿದರು.
ಭಾರತದಲ್ಲಿ ರಾಜಕಾರಣವನ್ನು ವೃತವಾಗಿಟ್ಟುಕೊಂಡವರು ಬೆರಳಣಿಕೆಯ ಜನವಾಗಿದ್ದು ಅಂತಹ ದಿಕ್ಕಿನಲ್ಲಿ ಸಾಗುತ್ತಿರುವ ನಳಿನ್ ಕುಮಾರ್ ಕಟೀಲು ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಬೇಕು. ಅದು ಕಾರ್ಯಕರ್ತರ ಗೆಲುವು ಆಗಬೇಕಾದರೆ ಪ್ರಧಾನಿ ಮೋದಿ ಗದ್ದುಗೆ ಏರಬೇಕಾದರೆ ನನ್ನ ಕೊಡುಗೆ ಏನು ಎಂಬುದಕ್ಕೆ ಉತ್ತರವಾಗಿ ಈಗಿಂದೀಗಲೇ ಶ್ರಮಿಸಬೇಕು ಎಂದು ನುಡಿದರು.
ಪೇಜ್ ಪ್ರಮುಖ್ ಕರ್ತವ್ಯ ಎಲ್ಲ ಮತಗಳು ಬಿಜೆಪಿಗೆ ಬೀಳಿಸಬೇಕು ಹಾಗೇ ಚಿಂತಿಸುವವನೇ ಪೇಜ್ ಪ್ರಮುಖ್. ಜಾತಿ ಧರ್ಮ ಪಕ್ಷಕ್ಕೋಸ್ಕರ ಇದುವರೆಗೆ ಜನರು ಯಾರಿಗೇ ಮತ ಹಾಕಿರಲಿ. ಈ ಬಾರಿ ಬಿಜೆಪಿಗೆ ಹಾಕುವಂತೆ ಮೋದಿ ಸರಕಾರದ ಆಡಳಿತ ಕಾರ್ಯವೈಖರಿ ತಿಳಿಸಬೇಕು. ಅಷ್ಟೇ ಸಾಕು ಅದು ಮೋದಿಯನ್ನು ಅಧಿಕಾರದ ಗದ್ದುಗೆ ಏರಿಸಲಿದೆ ಎಂದರು.
ಮೋದಿ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳೇ ಇಲ್ಲ. ಅಷ್ಟಕ್ಕೂ ಮೊದಲಿನ ಭಾರತವಲ್ಲ ಈಗ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ಕೊಟ್ಟಿದ್ದರೂ ಅಧಿಕಾರಿಗಳು ಅವರ ಮಾತನ್ನು ಗೌರವಿಸುತ್ತಿಲ್ಲ ಎಂದು ನುಡಿದರು.
16,520 ಕೋಟಿ ರೂ. ಅನುದಾನ ದಕ್ಷಿಣ ಕನ್ನಡ ಜಿಲ್ಲೆಗೆ ತರಲಾಗಿದ್ದು
ಭ್ರಷ್ಟಾಚಾರ ರಹಿತ ಸರಕಾರದ ಸಂಸದನಾಗಿ ಹೆಮ್ಮೆ ನನಗಿದೆ. ರಾಜ್ಯದ ಪತ್ರಿಕೆಯೊಂದು ನನಗೆ ರಾಜ್ಯದ ನಂ.1, ದೇಶದ 6ನೇ ಸಂಸದ ಸ್ಥಾನ ನೀಡಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸಮೀಕ್ಷೆಯಂತೆ ನಳಿನ್ ಕುಮಾರ್ ಕಟೀಲು ದೇಶದಲ್ಲಿ ಆರನೇ ಸ್ಥಾನ ಬಂದಿದ್ದರೆ ಅದು ನಾನು ಹೇಳಿದ್ದಲ್ಲ. ನೂತನ ಸಮೀಕ್ಷೆಯೊಂದು ದೇಶದಲ್ಲಿ ನನಗೆ 26ನೇ ಸ್ಥಾನ, ರಾಹುಲ್ ಗಾಂಧಿಗೆ 350ನೇ ಸ್ಥಾನ ನೀಡಿದ್ದು ನಾನು ಹೇಳಲಿಲ್ಲ. ಆದರ್ಶ ಗ್ರಾಮವೂ ರಾಜ್ಯದಲ್ಲಿ ಹೆಸರು ಪಡೆದಿದೆ. ಅದೆಲ್ಲವೂ ಜನಗಳ ಪ್ರೀತಿ ವಿಶ್ವಾಸದ ಫಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ನಿಕ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಜಿಲ್ಲಾ ಸಹ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಗೋಪಾಲಕೃಷ್ಣ ಹೇರಳೆ, ಕ್ಷೇತ್ರ ಸಹ ಪ್ರಭಾರಿ ರಾಧಾ ಕೃಷ್ಣ ಬೂಡಿಯಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಚುನಾವಣಾ ಕ್ಷೇತ್ರ ಸಂಚಾಲಕ ಚಂದ್ರಶೇಖರ್ ಉಚ್ಚಿಲ್, ಕಾರ್ಯದರ್ಶಿ ನಮಿತಾ ಶ್ಯಾಂ ಹಾಗೂ ನಮಿತಾ ಶ್ಯಾಂ ಉಪಸ್ಥಿತರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಸ್ವಾಗತಿಸಿದರು. ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಸಾಲಿಯಾನ್ ಹಾಗೂ ಯಶವಂತ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ವಂದಿಸಿದರು.