ಗುಜರಾತ್‌ನಲ್ಲಿ ವಲಸಿಗರ ಮೇಲೆ ದಾಳಿಗೆ ಜಿಗ್ನೇಶ್ ಮೇವಾನಿ ಹೊಣೆ: ಗಿರಿರಾಜ್ ಸಿಂಗ್
ಪಟ್ನಾ,ಮಾ.30: ಗುಜರಾತ್‌ನಲ್ಲಿ ನೆಲೆಸಿರುವ ಬಿಹಾರ ಮತ್ತು ಪಶ್ಚಿಮ ರಾಜ್ಯಗಳ ವಲಸಿಗರ ಮೇಲೆ ಕಳೆದ ವರ್ಷ ದಾಳಿ ನಡೆಯಲು ಯುವ ದಲಿತ ನಾಯಕ ಜಿಗ್ನೇಶ್ ಮೇವಾನಿಯೇ ಹೊಣೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.
ಸದ್ಯ ಮೇವಾನಿ ಬಿಹಾರದ ಬೆಗುಸರಾಯಿ ಲೋಕಸಭಾ ಕ್ಷೇತ್ರದಲ್ಲಿ ಸಿಂಗ್ ವಿರುದ್ಧ ಕಣಕ್ಕಿಳಿದಿರುವ ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಸಿಂಗ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮೇವಾನಿ ಬಿಜೆಪಿ ನಾಯಕನ ವಿರುದ್ಧ ಮಾನಹಾನಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಗುಜರಾತ್‌ನಲ್ಲಿ ವಲಸಿಗರ ವಿರುದ್ಧ ಹಿಂಸಾಚಾರಗಳು ನಡೆದ ಸಂದರ್ಭದಲ್ಲಿ ಆಡಳಿತಪಕ್ಷ ಬಿಜೆಪಿ ಮೌನಕ್ಕೆ ಜಾರಿದ್ದನ್ನು ಪರಿಗಣಿಸಿದರೆ ಈಗ ಸಿಂಗ್ ನೀಡಿರುವ ಹೇಳಿಕೆ, ಉಲ್ಟಾ ಕಳ್ಳ ಪೊಲೀಸ್‌ಗೆ ಬೈದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೇವಾನಿ ಬೆಗುಸರಾಯಿಯಲ್ಲಿ ಏನು ಮಾಡುತ್ತಿದ್ದಾರೆ. ಬಿಹಾರಿಗಳ ಮೇಲೆ ನಡೆದ ದಾಳಿಯಲ್ಲಿ ಅವರು ಭಾಗಿಯಾಗಿದ್ದರು. ರಾಜ್ಯದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಅನುಭವಿಸಿದ ಅವಮಾನಕ್ಕೆ ಜವಾಬ್ದಾರರಾಗಿರುವವರಿಗೆ ಮೇವಾನಿ ಪ್ರಚೋದನೆ ನೀಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.