ಪತ್ರಕರ್ತ ಖಶೋಗಿಯ ಸೌದಿ ಹಂತಕರು ತರಬೇತಿ ಪಡೆದಿದ್ದು ಅಮೆರಿಕದಲ್ಲಿ !

Update: 2019-03-31 03:46 GMT

ವಾಷಿಂಗ್ಟನ್, ಮಾ. 31: ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಖಶೋಗಿ ಅವರ ಹಂತಕರು ಅಮೆರಿಕದಲ್ಲೇ ತರಬೇತಿ ಪಡೆದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದೆ.

ಇದರೊಂದಿಗೆ ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡಲು ಕಾರಣವಾದ ಈ ನಿಗೂಢ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಸೌದಿ ಆಡಳಿತದ ಟೀಕಾಕಾರರಾಗಿದ್ದ ಖಶೋಗಿ ಟರ್ಕಿಯ ಇಸ್ತಾಂಬೂಲ್‌ನಲ್ಲಿರುವ ಸೌದಿ ಕಾನ್ಸುಲೇಟ್‌ನಲ್ಲಿ ಕಳೆದ ವರ್ಷದ ಅಕ್ಟೋಬರ್ 2ರಂದು ಹತ್ಯೆಯಾಗಿದ್ದರು. ರಿಯಾದ್‌ನಿಂದ ಆಗಮಿಸಿದ್ದ 15 ಮಂದಿಯ ತಂಡ ಅವರನ್ನು ಹತ್ಯೆ ಮಾಡಿತ್ತು. ಖಶೋಗಿ ಮೃತದೇಹದ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಪತ್ರಕರ್ತನ ಹತ್ಯೆಯನ್ನು ಮೊದಲು ನಿರಾಕರಿಸಿದ್ದ ಸೌದಿ ಅರೇಬಿಯಾ ಬಳಿಕ, ನಮ್ಮ ನಿಯಂತ್ರಣದಲ್ಲಿಲ್ಲದ ಏಜೆಂಟರು ನಡೆಸಿದ ಕಾರ್ಯಾಚರಣೆ ಇದು ಎಂದು ಒಪ್ಪಿಕೊಂಡು 11 ಮಂದಿ ಶಂಕಿತರ ವಿರುದ್ಧದ ವಿಚಾರಣೆ ಆರಂಭಿಸಿತ್ತು. ಇದಕ್ಕೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೊಣೆ ಎಂದು ಆಪಾದಿಸಿ ಅಮೆರಿಕದ ಸೆನೆಟ್ ನಿರ್ಣಯ ಕೈಗೊಂಡಿತ್ತು. ಆದರೆ ಟ್ರಂಪ್ ಈ ಘಟನೆ ಬಗ್ಗೆ ಎಲ್ಲೂ ಬಹಿರಂಗವಾಗಿ ತಮ್ಮ ನಿಲುವು ಪ್ರಕಟಿಸಿರಲಿಲ್ಲ.

ಟರ್ಕಿಯ ಗುಪ್ತಚರ ವಿಭಾಗ ಇರಿಸಿದ್ದ ಬಗ್‌ನಲ್ಲಿ ದಾಖಲಾದ ಅಂಶಗಳಿಂದ ತಿಳಿದುಬಂದಂತೆ ಖಶೋಗಿಯನ್ನು ಅಪಹರಿಸಿ, ಸೌದಿ ಅರೇಬಿಯಾಗೆ ಕರೆತಂದು ವಿಚಾರಣೆಗೆ ಗುರಿಪಡಿಸುವುದು ಮೂಲ ಉದ್ದೇಶವಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್‌ನ ಅಂಕಣಕಾರ ಡೇವಿಡ್ ಇಗ್ನಿಯಸ್ ಹೇಳಿದ್ದಾರೆ.

ಖಶೋಗಿಗೆ ಪ್ರಬಲ ಮಾದಕ ವಸ್ತುವನ್ನು ಚುಚ್ಚುಮದ್ದು ರೂಪದಲ್ಲಿ ನೀಡಲಾಗಿತ್ತು ಎಂದೂ ಹೇಳಿದ್ದಾರೆ. "ಹೀಗೆ ಮಾಡಬೇಡಿ; ನನಗೆ ಆಸ್ತಮಾ ಇದೆ. ಉಸಿರಾಡಲು ಸಾಧ್ಯವಾಗುತ್ತಿಲ್ಲ" ಎಂದು ಸಾಯುವ ಮುನ್ನ ಖಶೋಗಿ ಹೇಳಿರುವುದೂ ದಾಖಲಾಗಿದೆ ಎಂದು ವಿವರಿಸಿದ್ದಾರೆ. ಹತ್ಯೆ ಮಾಡಿದ ಸೌದಿ ರ್ಯಾಪಿಡ್ ಇಂಟರ್‌ವೆನ್ಷನ್ ತಂಡದ ಕೆಲ ಸದಸ್ಯರು ಅಮೆರಿಕದಲ್ಲಿ ತರಬೇತಿ ಪಡೆದಿರುವುದು ಕೂಡಾ ಖಚಿತ ಎಂದು ಇಗ್ನೇಶಿಯಸ್ ಹೇಳಿದ್ದಾರೆ.

ಅರ್ಕಾನ್ಸಾ ಮೂಲದ, ರಕ್ಷಣಾ ಇಲಾಖೆಯ ಲೈಸನ್ಸ್ ಪಡೆದ ಕಂಪನಿಯೊಂದು ಈ ವಿಶೇಷ ಕಾರ್ಯಾಚರಣೆಗೆ ತರಬೇತಿ ನೀಡಿದೆ ಎನ್ನುವ ಬಗ್ಗೆ ಸಿಐಎ ಎಚ್ಚರಿಕೆ ನೀಡಿರುವುದನ್ನು ಅವರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News