ಪಂಪ್‍ವೆಲ್ ಫ್ಲೈಓವರ್ ಅವ್ಯವಸ್ಥೆ ನಳಿನ್ ಸಾಧನೆ: ಐವನ್ ಡಿಸೋಜಾ
ಮೂಡುಬಿದಿರೆ: ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾಗಿ ದೊರೆತಿರುವ ಕೊಡುಗೆಗಳೆಲ್ಲವೂ ಕಾಂಗ್ರೆಸ್ ಎಂಪಿಗಳ ಅವಧಿಯದ್ದು. ಕಳೆದ 27 ವರ್ಷಗಳಿಂದ ಬಿಜೆಪಿಯ ಸಂಸದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಮಾಡಿಲ್ಲ. ನಳಿನ್ ಕಳೆದೆರಡು ಅವಧಿಗೆ ಸಂಸದರಾಗಿ ತಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳಲಾಗದೇ ಮೋದಿ ಹೆಸರು ಹೇಳಿ ಓಟು ಕೇಳುತ್ತಿದ್ದಾರೆ. ಅವರು ಮಾಡಿದ ದೊಡ್ಡ ಸಾಧನೆಯೆಂದರೆ ಪಂಪ್ ವೆಲ್ ಫ್ಲೈಓವರ್ ಅವ್ಯವಸ್ಥೆ. ಅದೊಂದು ಸ್ಮಾರಕವಾಗಿಬಿಟ್ಟಿದೆ. ಈಗ ಹತಾಶರಾಗಿ ವೈಯಕ್ತಿಕ ಟೀಕೆಗಿಳಿದು ಮಿಥುನ್ ರೈಯವರನ್ನೇ ಬಚ್ಚಾ ಎನ್ನುತ್ತಿರುವ ಬಿಜೆಪಿಯವರಿಗೆ ಮೊದಲು ಸ್ಪರ್ಧಿಸಿದಾಗ ನಳಿನ್ ಸಹಿತ ಹಲವು ನಾಯಕರು ಬಚ್ಚಾಗಳೇ ಆಗಿದದ್ದು ಮರೆತು ಹೋಯಿತೇ ? ಎಂದು ಶಾಸಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಮೀಕ್ಷೆಗಳು, ಜನತೆಯ ಒಲವು ನೋಡಿದಾಗ ಕಾಂಗ್ರೆಸ್ ಜಿಲ್ಲೆಯಲ್ಲಿ ಗೆದ್ದೇ ಗೆಲ್ಲುತ್ತದೆ. ರಾಜ್ಯದಲ್ಲಿಯೂ ನಮ್ಮ ಮೈತ್ರಿಕೂಟ 20-22 ಸೀಟು ಗಳಿಸುವುದು ನಿಶ್ಚಿತ ಎಂದ ಐವನ್ ಸೋಮವಾರ ಬೆಳ್ತಂಗಡಿಯಿಂದ ದ.ಕ ಜಿಲ್ಲೆಯಲ್ಲಿ ಮಿಥುನ್ ರೈ ಪರ ಪ್ರಚಾರಕ್ಕೆ ನಾಯಕರುಗಳ ಉಪಸ್ಥಿತಿಯಲ್ಲಿ ಸಚಿವ ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಸಹಿತ ಗಣ್ಯರೊಂದಿಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ ಈ ಸಂದರ್ಭದಲ್ಲಿ ಗಂಗಾಧರ ಗೌಡರ ಮಗ ರಂಜನ್ ಗೌಡ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂದರು.
ಸೋಮವಾರ ಅಪರಾಹ್ನ ಪುತ್ತೂರು, ಮಂಗಳವಾರ ಬೆಳಗ್ಗೆ ಸುಳ್ಯದಲ್ಲೂ ಪ್ರಚಾರಕ್ಕೆ ಚಾಲನೆ ದೊರೆಯಲಿದೆ ಎಂದ ಐವನ್ ಜಿಲ್ಲೆಗೆ ರಾಹುಲ್, ಪ್ರಿಯಾಂಕಾ ಸಹಿತ ಸ್ಟಾರ್ ಪ್ರಚಾರಕರು ಬರುವ ನಿರೀಕ್ಷೆ ಇದೆ ಎಂದರು.
ಜಿಲ್ಲೆಯ ಹೈವೇಗಳು, ರೈಲು, ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು. ಐಐಟಿ ಮಾದರಿಯ ತಾಂತ್ರಿಕ ಸಂಸ್ಥೆ, ಬೀಡಿ ಕಾರ್ಮಿಕರಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಎಂಟನೇ ಪರಿಚ್ಛೇದಕ್ಕೆ ತುಳು ಹೀಗೆ ಕಾಂಗ್ರೆಸ್ ಜಿಲ್ಲೆಗೆ ತನ್ನದೇ ಪ್ರಣಾಳಿಕೆ ಹೊಂದಿದೆ ಎಂದ ಐವನ್ ದೇಶ ರಕ್ಷಕರು ಎನ್ನುವ ಬಿಜೆಪಿ ಯವರಿಗೆ ತಪ್ಪುಗಳನ್ನು ತೋರಿಸಿದರೆ ದೇಶದ್ರೋಹಿಗಳು ಎನ್ನುತ್ತಾರೆ. ಕಳೆದ ಬಾರಿ ಚಾಯ್‍ವಾಲ ಎಂದಿದ್ದ ಮೋದಿ ಈಗ ಚೌಕೀದಾರ್ ಆಗಿ ಬಣ್ಣಬದಲಿಸಿ ದ್ದಾರೆ. ದುಬಾರಿ ಜಿಎಸ್ಟಿ, ರೈತರಿಗೆ ತೊಂದರೆ, ಉದ್ಯೋಗಾವಕಾಶಗಳ ಕೊರತೆ ಹೀಗೆ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಉಪಾಧ್ಯಕ್ಷ ವಾಸುಪೂಜಾರಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಮತ್ತಿತರರು ಹಾಜರಿದ್ದರು. ಭಾಗವಹಿಸಿದರು. ವೆಲೇರಿಯನ್ ಸಿಕ್ವೆರಾ ಕಾರ್ಯಕ್ರಮ ನಿರ್ವಹಿಸಿದರು.