ಬಿಜೆಪಿಯಲ್ಲಿ ಮೊದಲು ಪ್ರಜಾಪ್ರಭುತ್ವವಿತ್ತು, ಈಗ ಸರ್ವಾಧಿಕಾರವಿದೆ: ಶತ್ರುಘ್ನ ಸಿನ್ಹಾ

Update: 2019-03-31 15:57 GMT

ಹೊಸದಿಲ್ಲಿ,ಮಾ.31: ತಾನು ಬಿಜೆಪಿಯನ್ನು ತೊರೆಯುತ್ತಿರುವುದಾಗಿ ಪ್ರಕಟಿಸಿರುವ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು,ಕಾಂಗ್ರೆಸ್ ಪಕ್ಷವು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಅದನ್ನು ಸೇರಲು ತಾನು ನಿರ್ಧರಿಸಿದ್ದೇನೆ ಮತ್ತು ಹಾಗೆ ಮಾಡಲು ಕುಟುಂಬ ಸ್ನೇಹಿತ ಲಾಲುಪ್ರಸಾದ ಯಾದವ ಅವರೂ ತನಗೆ ಸಲಹೆ ನೀಡಿದ್ದಾರೆ ಮತ್ತು ಬೆಂಬಲದ ಭರವಸೆಯನ್ನು ನೀಡಿದ್ದಾರೆ ಎಂದು ರವಿವಾರ ಹೇಳಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ,ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ರಂತಹ ನಾಯಕರು ತಾನು ತಮ್ಮ ಪಕ್ಷಗಳಿಗೆ ಸೇರ್ಪಡೆಗೊಳ್ಳಬೇಕೆಂದು ಬಯಸಿದ್ದರು. ಆದರೆ ಎಂತಹ ಸ್ಥಿತಿಯಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಕ್ಷೇತ್ರ ಪಟ್ನಾ ಸಾಹಿಬ್ ಆಗಿರುತ್ತದೆ ಎನ್ನುವುದನ್ನು ತಾನು ಸ್ಪಷ್ಟಪಡಿಸಿದ್ದೇನೆ ಎಂದು ಹಾಲಿ ಸಿನಿಮಾ ಸಂಬಂಧಿತ ಸನ್ಮಾನ ಸ್ವೀಕಾರಕ್ಕಾಗಿ ಮಸ್ಕತ್‌ನಲ್ಲಿರುವ ಸಿನ್ಹಾ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

ತಾನು ಸುದೀರ್ಘ ಕಾಲದಿಂದ ಸಂಬಂಧ ಹೊಂದಿದ್ದ ಬಿಜೆಪಿಯನ್ನು ತೊರೆಯುವುದು ತನಗೆ ನೋವನ್ನುಂಟು ಮಾಡಿದೆ. ಆದರೆ ಎಲ್.ಕೆ.ಅಡ್ವಾಣಿ,ಮುರಳಿ ಮನೋಹರ ಜೋಶಿ,ಅರುಣ ಶೌರಿ ಮತ್ತು ಯಶವಂತ ಸಿನ್ಹಾ ಅವರಂತಹ ದಿಗ್ಗಜರನ್ನು ಪಕ್ಷವು ನಡೆಸಿಕೊಂಡಿರುವ ರೀತಿಯಿಂದ ತಾನು ರೋಸಿ ಹೋಗಿದ್ದೇನೆ ಎಂದರು.

2014ರ ಚುನಾವಣೆಯಲ್ಲಿ ಪಕ್ಷದ ಬೆಂಬಲವಿಲ್ಲದೆ ತನ್ನ ಸ್ವಂತ ಸಾಮರ್ಥ್ಯದಿಂದಲೇ ಪಟ್ನಾ ಸಾಹಿಬ್ ಕ್ಷೇತ್ರದಿಂದ ಗೆದ್ದಿರುವುದಾಗಿ ಹೇಳಿದ ಸಿನ್ಹಾ,ಈ ಬಾರಿ ತನ್ನ ಗೆಲುವಿನ ಹಿಂದಿನ ದಾಖಲೆಗಳನ್ನು ಮುರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಬಿಜೆಪಿ ನಾಯಕತ್ವವನ್ನು ಟೀಕಿಸಿದ ಅವರು,ಈ ಹಿಂದೆ ಪಕ್ಷದಲ್ಲಿ ಪ್ರಜಾಪ್ರಭುತ್ವವಿತ್ತು ಮತ್ತು ಈಗ ಸರ್ವಾಧಿಕಾರವಿದೆ ಎಂದರು.

ಬಿಹಾರದಲ್ಲಿ ಮಹಾಮೈತ್ರಿಕೂಟದ ಸ್ಥಾನಹಂಚಿಕೆಯಲ್ಲಿ ಪಟ್ನಾ ಸಾಹಿಬ್ ಕ್ಷೇತ್ರ ಕಾಂಗ್ರೆಸ್‌ಗೆ ದಕ್ಕಿರುವುದು ಮಹತ್ವದ ಅಂಶವಾಗಿದೆ ಎಂದ ಸಿನ್ಹಾ,ಎಂತಹುದೇ ಸಂದರ್ಭದಲ್ಲಿಯೂ ತಾನು ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News