×
Ad

ಮಣಿಪಾಲ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅತ್ಯಾಚಾರ, ಕೊಲೆ ಆರೋಪಿ ಪರಾರಿ

Update: 2019-03-31 21:53 IST

ಉಡುಪಿ, ಮಾ. 31: ಮೂಡುಸಗ್ರಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಬಾದಾಮಿ ತಾಲೂಕಿನ ಹಾಗೂ ಪ್ರಸ್ತುತ ಕಾಪು ಮಲ್ಲಾರು ನಿವಾಸಿ ಹನುಮಂತ ಬಸಪ್ಪಕಂಬಳಿ (39) ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಇಂದು ಸಂಜೆ ವೇಳೆ ನಡೆದಿದೆ.

ಮಾ. 30ರಂದು ಬಂಧನಕ್ಕೆ ಒಳಗಾದ ಹುನುಮಂತನನ್ನು ಪೊಲೀಸರು ರವಿವಾರ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರ ಶೇಖರ್ ಎಂ.ಜೋಶಿ ಅವರ ನಿವಾಸದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು.

ಅದರಂತೆ ಪೊಲೀಸರು ಆತನನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಅದಕ್ಕಾಗಿ ಕಾರ್ಯಪ್ರವೃತರಾಗಿರುವ ಪೊಲೀಸರು ಆತನಿಗೆ ಹುಡುಕುವ ಕಾರ್ಯ ನಡೆಸು ತ್ತಿದ್ದಾರೆ.

ಆರೋಪಿಯನ್ನು ಮಾ. 30ರಂದು ಬಂಧಿಸಿದ್ದರೂ ಪೊಲೀಸ್ ಇಲಾಖೆ, ಈ ಸುದ್ದಿಯನ್ನು ಅಧಿಕೃತವಾಗಿ ಇಂದು ಮಧ್ಯಾಹ್ನ ವೇಳೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ. ಇದೀಗ ಆರೋಪಿ ಪರಾರಿಯಾಗಿರುವ ಮಾಹಿತಿ ಪಡೆಯಲು ಯಾವುದೇ ಪೊಲೀಸ್ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News