×
Ad

ಉಡುಪಿ: ಮನೆ ಬಿಟ್ಟು ಬಂದ ಬಾಲಕ; ರೈಲ್ವೆ ಪೊಲೀಸರಿಂದ ಮರಳಿ ತಾಯಿ ಮಡಲಿಗೆ

Update: 2019-03-31 22:11 IST

ಉಡುಪಿ, ಮಾ. 31: ತಾಯಿ ಮೊಬೈಲ್ ತೆಗೆಸಿಕೊಡದ ಸಿಟ್ಟಿನಿಂದ ಮನೆ ಬಿಟ್ಟು ರೈಲು ಹತ್ತಿಕೊಂಡು ಬಂದ ಬಾಲಕನನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿ ತಾಯಿಗೆ ಒಪ್ಪಿಸಿದ ಘಟನೆ ಇಂದು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬಾಲಕನನ್ನು ಭಟ್ಕಳದ ಲತಾ ಪೈ ಎಂಬವರ ಮಗ ಅತುಲ್ ರಮಾನಾಥ್ ಪೈ(15) ಎಂದು ಗುರುತಿಸಲಾಗಿದೆ. ಈತ ಸೋನಾರ್‌ಕೇರಿಯ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ 9ನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಚುನಾವಣೆ ಪ್ರಯುಕ್ತ ಇಂದ್ರಾಳಿ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ, ಮಾ. 30ರಂದು ರಾತ್ರಿ 8.30ರ ಸುಮಾರಿಗೆ ನಿಲ್ದಾಣಕ್ಕೆ ಆಗಮಿಸಿದ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನಿಂದ ಫ್ಲಾಟ್‌ಫಾರ್ಮ್ ಒಂದರಲ್ಲಿ ಇಳಿದ ಬಾಲಕನನ್ನು ನೋಡಿದರು. ಆತನನ್ನು ವಿಚಾರಿಸಿದಾಗ ಆತ ತನ್ನ ಹೆಸರನ್ನು ಅತುಲ್ ಎಂದು ಹೇಳಿಕೊಂಡಿದ್ದು, ನಾನು ಆಸ್ಪತ್ರೆಯಲ್ಲಿರುವ ನನ್ನ ಗೆಳೆಯನನ್ನು ನೋಡಲು ಬಂದಿರುವುದಾಗಿ ತಿಳಿಸಿದನು.

ಇದರಿಂದ ಅನುಮಾನಗೊಂಡ ಪೊಲೀಸ್ ಸಿಬ್ಬಂದಿ, ಆತನನ್ನು ಹೆಚ್ಚಿನ ವಿಚಾರಣೆಗಾಗಿ ರೈಲ್ವೆ ನಿಲ್ದಾಣದಲ್ಲಿರುವ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಆತ ತನ್ನ ಹೆಸರು, ವಿಳಾಸ ಹಾಗೂ ಮನೆ ಬಿಟ್ಟು ಬರಲು ಕಾರಣವನ್ನು ಪೊಲೀಸರ ಮುಂದೆ ಹೇಳಿಕೊಂಡನು. ಬಡ ಕುಟುಂಬದ ಲತಾ ಪೈ ಅವರಿಗೆ ಇಬ್ಬರು ಮಕ್ಕಳಿದ್ದು, ಪತಿ ರಮಾನಾಥ್ ಪೈ ಅಪಘಾತದಲ್ಲಿ ಮೃತಪಟ್ಟಿದ್ದರು. ಲತಾ ಪೈ ಕೂಲಿ ಕೆಲಸ ಮಾಡಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಕಲಿಕೆಯಲ್ಲಿ ಆಸಕ್ತಿ ಇಲ್ಲದ ಅತುಲ್ ಮೊಬೈಲ್ ತೆಗೆಸಿಕೊಡುವಂತೆ ತಾಯಿ ಮುಂದೆ ಬೇಡಿಕೆ ಇಟ್ಟಿದ್ದನು. ಕಲಿಯುವಾಗ ಮೊಬೈಲ್ ತೆಗೆಸಿಕೊಡುವುದಿಲ್ಲ ಎಂದು ಲತಾ ಪೈ ಮಗನಿಗೆ ಬೈದಿದ್ದರು. ಇದೇ ಸಿಟ್ಟಿನಲ್ಲಿ ಅತುಲ್ ಯಾರಿಗೂ ಹೇಳದೆ ಮಾ.29ರಂದು ಮನೆ ಬಿಟ್ಟು ಬಂದಿದ್ದನು. ಈ ಬಗ್ಗೆ ಲತಾ ಪೈ ಸಂಬಂಧಿಕರನ್ನು ಸಂಪರ್ಕಿಸಿ ಹುಡುಕುವ ಪ್ರಯತ್ನ ಮಾಡಿದ್ದರು.

ಅತುಲ್ ನೀಡಿದ ಮಾಹಿತಿಯಂತೆ ರೈಲ್ವೆ ಪೊಲೀಸರು ಭಟ್ಕಳದ ಸ್ಥಳೀಯರೊಬ್ಬರ ಮೂಲಕ ಆತ ಕಲಿಯುತ್ತಿದ್ದ ಶಾಲೆಯ ನಂಬರ್ ಪಡೆದು ಕೊಂಡರು. ಶಾಲೆಯವರಿಂದ ತಾಯಿಯನ್ನು ಸಂಪರ್ಕಿಸಿದ ಪೊಲೀಸರು ಮಗನ ಬಗ್ಗೆ ಮಾಹಿತಿ ನೀಡಿದರು. ಅದರಂತೆ ತಾಯಿ ಇಂದು ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಅತುಲ್‌ಗೆ ಸಮಾಲೋಚನೆ ನಡೆಸಿದ ಪೊಲೀಸರು ಬಳಿಕ ಆತನನ್ನು ತಾಯಿ ಲತಾ ಪೈ ಅವರಿಗೆ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News