ವಿಜಯ ಬ್ಯಾಂಕ್, ದೇನ ಬ್ಯಾಂಕ್ ಎಪ್ರಿಲ್ 1ರಿಂದ ‘ಬ್ಯಾಂಕ್ ಆಫ್ ಬರೋಡ’ ಜೊತೆ ವಿಲೀನ

Update: 2019-03-31 17:07 GMT

ಹೊಸದಿಲ್ಲಿ,ಮಾ.31: ವಿಜಯ ಬ್ಯಾಂಕ್ ಮತ್ತು ದೇನ ಬ್ಯಾಂಕ್ ಎಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡ (ಬಿಒಬಿ) ಜೊತೆ ವಿಲೀನಗೊಳ್ಳುವ ಮೂಲಕ ಬ್ಯಾಂಕ್ ಆಫ್ ಬರೋಡ ದೇಶದ ಮೂರನೇ ಅತೀದೊಡ್ಡ ಸಾಲದಾತ ಬ್ಯಾಂಕ್ ಆಗಿ ರೂಪುಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಸೋಮವಾರದಿಂದ ವಿಜಯ ಬ್ಯಾಂಕ್ ಮತ್ತು ದೇನ ಬ್ಯಾಂಕ್‌ನ ಶಾಖೆಗಳು ಬಿಒಬಿ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ. ಈ ಎರಡು ಬ್ಯಾಂಕ್‌ಗಳ ಗ್ರಾಹಕರನ್ನು ಇನ್ನು ಮುಂದೆ ಬ್ಯಾಂಕ್ ಆಫ್ ಬರೋಡ ಗ್ರಾಹಕರೆಂದು ಪರಿಗಣಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಲೀನದಲ್ಲಿ ಯಾವುದೇ ಸಮಸ್ಯೆಯಾಗದಿರಲು ಹೆಚ್ಚುವರಿ ವೆಚ್ಚವನ್ನು ಭರಿಸುವ ಉದ್ದೇಶದಿಂದ ಸರಕಾರ ಕಳೆದ ವಾರ ಬಿಒಬಿಗೆ 5,042 ಕೋಟಿ ರೂ. ನೀಡಿತ್ತು.

ವಿಲೀನ ಯೋಜನೆಯ ಪ್ರಕಾರ, ವಿಜಯ ಬ್ಯಾಂಕ್ ಶೇರುದಾರರು ಪ್ರತಿ 1,000 ಶೇರುಗಳಿಗೆ ಬಿಒಬಿಯ 402 ಶೇರ್‌ಗಳನ್ನು ಮತ್ತು ದೇನ ಬ್ಯಾಂಕ್ ಶೇರುದಾರರು ಪ್ರತಿ 1,000 ಶೇರುಗಳಿಗೆ ಬಿಒಬಿಯ 110 ಶೇರ್‌ಗಳನ್ನು ಪಡೆದುಕೊಳ್ಳಲಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಆರೋಗ್ಯಪೂರ್ಣ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ಸಲುವಾಗಿ ವಿತ್ತೀಯ ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ತೆಗೆದುಕೊಂಡಿರುವ ಅನೇಕ ಕ್ರಮಗಳ ಭಾಗವೇ ಈ ಮೂರು ಬ್ಯಾಂಕ್‌ಗಳ ವಿಲೀನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News