ದಲಿತ ಮತಗಳ ವಿಭಜನೆಗೆ ಭೀಮ್ ಆರ್ಮಿಯ ಚಂದ್ರಶೇಖರ್ ಸ್ಪರ್ಧೆಗೆ ಬಿಜೆಪಿ ಸಂಚು: ಮಾಯಾವತಿ ಆರೋಪ

Update: 2019-03-31 17:32 GMT

ಲಕ್ನೋ,ಮಾ.31: ಬಿಜೆಪಿಯು ನೀಚ ರಾಜಕೀಯದಲ್ಲಿ ತೊಡಗಿದೆ ಎಂದು ರವಿವಾರ ಆರೋಪಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು,ದಲಿತ ಮತಗಳನ್ನು ಒಡೆಯುವ ಮತ್ತು ಅದರ ಲಾಭಗಳನ್ನು ಪಡೆದುಕೊಳ್ಳುವ ಕೆಟ್ಟ ಉದ್ದೇಶದಿಂದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಭೀಮ್ ಆರ್ಮಿಯ ವರಿಷ್ಠ ಚಂದ್ರಶೇಖರ್ ಆಝಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿಯು ಸಂಚು ನಡೆಸಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾಗಿರುವ ವಾರಣಾಸಿಯಿಂದ ತಾನು ಸ್ಪರ್ಧಿಸುವುದಾಗಿ ಆಝಾದ್ ಈ ತಿಂಗಳ ಆರಂಭದಲ್ಲಿ ಪ್ರಕಟಿಸಿದ್ದರು.

ಬಿಜೆಪಿಯ ಸಂಚಿನಿಂದಲೇ ಭೀಮ್ ಆರ್ಮಿಯು ರೂಪುಗೊಂಡಿದೆ ಮತ್ತು ದಲಿತ ವಿರೋಧಿ ಮನಸ್ಥಿತಿಯ ಆ ಪಕ್ಷವು ಈಗ ನೀಚ ರಾಜಕೀಯದಲ್ಲಿ ತೊಡಗಿದೆ. ತನ್ನ ಏಜೆಂಟ್ ಆಗಿ ಬಿಎಸ್‌ಪಿಯಲ್ಲಿ ಆಝಾದ್‌ರನ್ನು ಸೇರ್ಪಡೆಗೊಳಿಸಲು ಬಿಜೆಪಿಯು ಬಹುವಾಗಿ ಪ್ರಯತ್ನಿಸಿತ್ತು,ಆದರೆ ಅದರ ಪಿತೂರಿ ವಿಫಲಗೊಂಡಿತ್ತು. ನಿರಂಕುಶ ಹಾಗೂ ದಲಿತ,ಒಬಿಸಿ ಮತ್ತು ಅಲ್ಪಸಂಖ್ಯಾತರ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಅನಿವಾರ್ಯವಾಗಿದೆ. ಇದಕ್ಕಾಗಿ ಪ್ರತಿಯೊಂದೂ ದಲಿತ ಮತವು ಅಗತ್ಯವಾಗಿದೆ. ಭವಿಷ್ಯದಲ್ಲಿ ಪಶ್ಚಾತ್ತಾಪ ಪಡದಿರಲು ಮತ್ತು ಜೀವನವು ನರಕಸದೃಶವಾಗದಿರಲು ನಿಮ್ಮ ಮತಗಳು ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಮಾಯಾವತಿ ಟ್ವೀಟಿಸಿದ್ದಾರೆ.

ಆಝಾದ್ ಶನಿವಾರ ವಾರಣಾಸಿಯಲ್ಲಿ ರೋಡ್ ಶೋನೊಂದಿಗೆ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು,ಮೋದಿಯವರ ಸೋಲಿಗೆ ಕ್ಷಣಗಣನೆ ಆರಂಭವಾಗಿದೆ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News