ನೀತಿ ಸಂಹಿತೆ ಉಲ್ಲಂಘನೆ: ಕಾರನ್ನು ತಡೆಹಿಡಿದ ಮ್ಯಾಜಿಸ್ಟ್ರೇಟ್ ಜೊತೆ ಕೇಂದ್ರ ಸಚಿವ ಚೌಭೆ ವಾಗ್ವಾದ

Update: 2019-03-31 17:35 GMT

ಪಾಟ್ನಾ,ಮಾ.31: ಬುಕ್ಸಾರ್ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪದಲ್ಲಿ ತನ್ನ ಕಾರನ್ನು ತಡೆಹಿಡಿದ ಚುನಾವಣಾಧಿಕಾರಿಯೊಬ್ಬರ ಜೊತೆ ಕೇಂದ್ರ ಸಚಿವ ಅಶ್ವಿನಿ ಚೌಭೆ ಅಸಭ್ಯವಾಗಿ ವರ್ತಿಸಿರುವುದಾಗಿ ದೂರಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ತನ್ನ ವಾಹನ ವ್ಯೂಹವನ್ನು ತಡೆದು ನಿಲ್ಲಿಸಿದ್ದರಿಂದ ಕೆರಳಿದ ಕೇಂದ್ರ ಸಚಿವ ಅಶ್ವಿನಿ ಚೌಭೆ ಅವರು ಉಪಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಸಿಎಂ) ಜೊತೆ ವಾಗ್ವಾದ ನಡೆಸುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

 ‘‘ ಇಲ್ಲಿ ಸಮಸ್ಯೆಯೇನು ಬಂತು? . ಯಾರು ಈ ಆದೇಶ ನೀಡಿದ್ದಾರೆ. ನಿಮಗೆ ಏನಾದರೂ ಮಾಡಬೇಕಿಂದಿದ್ದರೆ ನನ್ನನ್ನು ಜೈಲಿಗೆ ಕಳುಹಿಸಿ. ಇದು ನನ್ನ ವಾಹನ ಹಾಗೂ ನಿಮಗೆ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ’’ಎಂದು ಚೌಬೆ, ಕಟುವಾಗಿ ಉತ್ತರಿಸಿದಾಗ ಅಧಿಕಾರಿಯವರು ಚುನಾವಣಾ ಆಯೋಗವು ವಾಹನವನ್ನು ವಶಕ್ಕೆ ತೆಗೆದುಕೊಳ್ಳಲು ಆದೇಶಿಸಿದೆಯೇ ಹೊರತು ವ್ಯಕ್ತಿಯನ್ನಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಆನಂತರ ಎಸ್‌ಡಿಎಂ ಕೆ.ಕೆ. ಉಪಾಧ್ಯಾಯ ಅವರು ಸುದ್ದಿಗಾರರ ಜೊತೆ ಮಾತನಾಡಿ, ಕಾನೂನಿನ ನಿಯಮಗಳನ್ವಯ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಉತ್ತರಿಸಿದರು.

ರ್ಯಾಲಿಯಲ್ಲಿ ವಾಹನಗಳಿಗೆ ಅನುಮತಿಯನ್ನು ಪಡೆಯಲಾಗಿರಲಿಲ್ಲ. ಆದರೆ ಸಚಿವ ರ ವಾಹನದ ಸಾಲಿನಲ್ಲಿ 30-40 ವಾಹನಗಳಿದ್ದವು. ಈ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಉಪಾಧ್ಯಾಯ ತಿಳಿಸಿದರು. ಸಚಿವರ ವಾಹನವ್ಯೂಹದಲ್ಲಿದ್ದ ಪ್ರತಿಯೊಂದು ವಾಹನದ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆಯೆಂದು ಅವರು ತಿಳಿಸಿದರು.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಚಿವರಾದ ಚೌಭೆ ಬುಕ್ಸಾರ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಈ ಚುನಾವಣೆಯಲ್ಲಿ ಅವರನ್ನು ಬಿಜೆಪಿ ಮತ್ತೆ ಅಲ್ಲಿ ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News