×
Ad

ಕಾಂಗ್ರೆಸ್, ಬಿಜೆಪಿ ಕಾರುಗಳಲ್ಲಿ ‘ಚೌಕೀದಾರ್’ ಪರ-ವಿರೋಧ ಸ್ಟಿಕ್ಕರ್ಸ್‌!

Update: 2019-04-01 18:06 IST

ಉಡುಪಿ, ಎ.1: ಚುನಾವಣಾ ಭಾಷಣಗಳಲ್ಲಿ ಪರ ವಿರೋಧದ ಮಾತನಾಡುವುದು, ಘೋಷಣೆ ಕೂಗುವುದು ಸಾಮಾನ್ಯ. ಆದರೆ ಈಗ ಉಡುಪಿಯಲ್ಲಿ ಇಂತಹ ಪರ-ವಿರೋಧಗಳ ಸ್ಟಿಕ್ಕರ್ ವಾರ್ ಒಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರ, ಕಾರ್ಯಕರ್ತರಲ್ಲಿ ಕಾಣಿಸಿಕೊಂಡಿದೆ. ಅದೂ ಕಾರುಗಳಲ್ಲಿ ಈ ಸ್ಟಿಕ್ಕರ್‌ಗಳು ರಾರಾಜಿಸುವ ಮೂಲಕ.

ಈ ಬಾರಿಯ ಚುನಾವಣೆಯಲ್ಲಿ ಚೌಕೀದಾರ್ ಪದ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯ ಜನಪ್ರತಿನಿಧಿಗಳು, ನಾಯಕರು ಹಾಗೂ ಕಾರ್ಯಕರ್ತರು ಎಲ್ಲಡೆ ‘ನಾನೂ ಚೌಕೀದಾರ್’(ಮೆ ಭೀ ಚೌಕೀದಾರ್) ಎಂಬ ಪದವನ್ನು ಬಳಕೆ ಮಾಡುತ್ತಿದ್ದಾರೆ.

ಅದಕ್ಕೆ ವಿರೋಧವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು 'ಚೌಕೀದಾರ್ ಚೋರ್ ಹೈ' ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಉಡುಪಿಯಲ್ಲಿ ಇದು ಇಷ್ಟಕ್ಕೆ ಸೀಮಿತವಾಗಿರದೆ ತಮ್ಮ ತಮ್ಮ ಕಾರುಗಳಲ್ಲಿಯೂ ಸ್ಟಿಕ್ಕರ್ ರೂಪದಲ್ಲಿ ಕಂಡುಬರುತ್ತಿವೆ. ಒಟ್ಟಾರೆ ಈ ‘ಚೌಕಿದಾರ್’ ಪರ ಹಾಗೂ ವಿರೋಧದ ಸ್ಟಿಕ್ಕರ್‌ಗಳು ಕ್ರೇಝ್ ಆಗುತ್ತಿವೆ.

ಕಾಂಗ್ರೆಸ್ ಮುಖಂಡರ ಕಾರುಗಳ ಹಿಂದಿನ ಗಾಜುಗಳಲ್ಲಿ ಚೌಕೀದಾರ್ ಚೋರ್ ಹೈ ಹಾಗೂ ಬಿಜೆಪಿ ಮುಖಂಡರು ತಮ್ಮ ಕಾರುಗಳಲ್ಲಿ ನಾನೂ ಚೌಕೀದಾರ್ ಎಂಬ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡಿದ್ದಾರೆ. ಈ ಮೂಲಕ ಎರಡೂ ಪಕ್ಷಗಳವರು ಸ್ಟಿಕ್ಕರ್‌ಗಳ ಮೂಲಕ ಚುನಾವಣಾ ಕಾವು ಹೆಚ್ಚಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News