×
Ad

‘ವಿಜಯ ಬ್ಯಾಂಕ್ ಹೆಸರಿಗೆ ವಿದಾಯ: ಕರಾವಳಿಗೆ ಕರಾಳ ದಿನ’

Update: 2019-04-01 22:30 IST

ಉಡುಪಿ, ಎ.1: ಕೇಂದ್ರ ಸರಕಾರದ ನಿರ್ಧಾರದಿಂದಾಗಿ ಕರಾವಳಿ ಜನತೆಯ ಆಸ್ಮಿತೆಯಾಗಿದ್ದ ಸಾರ್ವಜನಿಕ ರಂಗದ ಪ್ರತಿಷ್ಠಿತ ‘ವಿಜಯಾ ಬ್ಯಾಂಕ್’ನ ಅಸ್ತಿತ್ವಕ್ಕೆ ಕೊನೆಯ ದಿನ ಎದುರಾಗಿರುವುದು ಕರಾವಳಿಯ ಜನತೆಯ ಪಾಲಿಗೆ ನಿಜಕ್ಕೂ ಕರಾಳ ದಿನವಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅಭಿಪ್ರಾಯಪಟ್ಟಿದ್ದಾರೆ.

ಎಂಬತ್ತು ವರ್ಷಗಳ ಹಿಂದೆ ಕರಾವಳಿಯ ಉದ್ಯಮಶೀಲ ಸಹಕಾರಿ ಬಂಧು ಗಳು ಕಟ್ಟಿದ ವಿಜಯಬ್ಯಾಂಕ್ ದೇಶದೆಲ್ಲೆಡೆ ವಿಸ್ತರಿಸಿ ಕರಾವಳಿ ಜಿಲ್ಲೆಗೆ ಹಾಗೂ ಜಿಲ್ಲೆಯ ಜನತೆಗೆ ಪ್ರತಿಷ್ಠೆಯನ್ನು ತಂದು ಕೊಟ್ಟಿತ್ತು. ಇದೀಗ ವಿಜಯಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕಿನೊಂದಿಗೆ ವಿಲೀನ ಮಾಡಿ, ಅಂತಿಮವಾಗಿ ವಿಜಯ ಬ್ಯಾಂಕಿನ ಹೆಸರನ್ನೇ ಇತಿಹಾಸದ ಪುಟಕ್ಕೆ ಸೇರಿಸುವ ಮೂಲಕ ಕೇಂದ್ರ ಸರಕಾರವು ಕರಾವಳಿ ಜನತೆಯ ಸ್ವಾಭಿಮಾನ ಧಕ್ಕೆ ತಂದಿದೆ ಎಂದವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸಾವಿರಾರು ಉದ್ಯೋಗಿಗಳಲ್ಲಿ ಇದು ನಮ್ಮ ಬ್ಯಾಂಕ್ ಎಂದು ಭದ್ರವಾಗಿದ್ದ ಅಭಿಮಾನವನ್ನು ಹೊಸಕಿ ಹಾಕಿದೆ ಎಂದು ಸಚಿವೆ ಡಾ.ಜಯಮಾಲ ಅವರು ಹೇಳಿದ್ದಾರೆ. ಎಂಬತ್ತು ವರ್ಷಗಳ ಹಿಂದೆ ಬ್ಯಾಂಕ್ ಕಟ್ಟಿದವರ ಕಷ್ಟವನ್ನು ಕೇಂದ್ರ ಅರ್ಥ ಮಾಡಿಕೊಂಡಿದ್ದರೆ, ಈ ರೀತಿಯ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಕೇಂದ್ರದ ನಿರ್ಧಾರ ನಿಜಕ್ಕೂ ಕರಾಳ ನಿರ್ಧಾರ ಎಂದು ಸಚಿವೆ ಡಾ. ಜಯಮಾಲ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News