ನಂತೂರು ಸರ್ಕಲ್ ನಲ್ಲಿ ಸರಣಿ ಅಪಘಾತ: ಹಲವು ಮಂದಿಗೆ ಗಾಯ
ಮಂಗಳೂರು, ಎ.1: ನಗರದ ನಂತೂರು ಸರ್ಕಲ್ ನಲ್ಲಿ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಹಲವರು ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಂಗಳೂರು ನಗರದ ಕದ್ರಿ ಸಂಚಾರ ಪೊಲೀಸರು ಬೈಕ್ ಗಳನ್ನು ತಪಾಸಣೆ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಪೊಲೀಸರೊಬ್ಬರು ತಪಾಸಣೆಗಾಗಿ ಏಕಾಏಕಿ ಬೈಕೊಂದನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಈ ವೇಳೆ ಬೈಕ್ ನ ಹಿಂದೆ ಬರುತ್ತಿದ್ದ ಕಾರು ಚಾಲಕ ದಿಢೀರನೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ಆ ಕಾರಿನ ಹಿಂದುಗಡೆ ಬರುತ್ತಿದ್ದ ಮತ್ತೊಂದು ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಎರಡು ಕಾರುಗಳಲ್ಲಿದ್ದವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸರಣಿ ಅಪಘಾತಕ್ಕೆ ಕಾರಣ ಎನ್ನಲಾದ ಸಂಚಾರ ಪೊಲೀಸ್ ಪೇದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.
ಜನಜಂಗುಳಿ: ನಗರದ ಜನನಿಬಿಡ ಪ್ರದೇಶ ನಂತೂರಿನಲ್ಲಿ ಈ ಸರಣಿ ಅಪಘಾತ ಸಂಭವಿಸುತ್ತಿದ್ದಂತೆ ನೂರಾರು ಮಂದಿ ಜಮಾಯಿಸಿದ್ದಾರೆ. ಈ ವೇಳೆ ಕದ್ರಿ ಪೊಲೀಸರು ಜನರನ್ನು ಸ್ಥಳದಿಂದ ಚದುರಿಸಿದರು.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.