×
Ad

ಮಹಿಳೆಯರ ಸುರಕ್ಷತೆಗಾಗಿ ಉಡುಪಿಯಲ್ಲಿ ‘ರಾಣಿ ಅಬ್ಬಕ್ಕ ಪಡೆ’

Update: 2019-04-02 18:22 IST

ಉಡುಪಿ, ಎ.2: ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಉದ್ದೇಶದಿಂದ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ‘ರಾಣಿ ಅಬ್ಬಕ್ಕ ಪಡೆ’ಯನ್ನು ರಚಿಸಲಾಗಿದ್ದು, ಇನ್ನು ಮುಂದೆ ಈ ಪಡೆಯು ಬೀದಿ ಕಾಮುಕರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರಗಿಸಲಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ವಿಶೇಷ ಮುತುವರ್ಜಿ ಯಿಂದ ಆರಂಭಿಸಿರುವ ಈ ವಿಶೇಷ ಪಡೆಯು ಇಂದಿನಿಂದ ಉಡುಪಿ ನಗರ ಹಾಗೂ ಮಣಿಪಾಲದಲ್ಲಿ ಕಾರ್ಯಾಚರಿಸಲಿದೆ. ಈ ಪಡೆಗೆ ಎಸ್ಪಿ ಅವರು ಮಂಗಳವಾರ ಉಡುಪಿ ಚಂದು ಮೈದಾನದಲ್ಲಿ ಅಧಿಕೃತ ಚಾಲನೆ ನೀಡಿದರು.

ಜಿಲ್ಲೆಯ ಏಕೈಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ 15 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಒಬ್ಬರು ಪೊಲೀಸ್ ನಿರೀಕ್ಷಕರು (ಪುರುಷರು), ಒಬ್ಬರು ಮಹಿಳಾ ಉಪನಿರೀಕ್ಷಕರು, ಇಬ್ಬರು ಸಹಾಯಕ ಪೊಲೀಸ್ ಉಪ ನಿರೀಕ್ಷಕರು (ಇದರಲ್ಲಿ ಒಬ್ಬರು ಪುರುಷರು), ಇಬ್ಬರು ಮಹಿಳಾ ಹೆಡ್‌ಕಾನ್ಟೇಬಲ್‌ಗಳು ಮತ್ತು 9 ಮಂದಿ ಮಹಿಳಾ ಸಿಬ್ಬಂದಿಗಳಿದ್ದಾರೆ.

ರಾಣಿ ಅಬ್ಬಕ್ಕ ಪಡೆಯ ವಾಹನದಲ್ಲಿ ಮಹಿಳಾ ಠಾಣೆ ಮಹಿಳಾ ಉಪ ನಿರೀಕ್ಷಕರು ಅಥವಾ ಸಹಾಯಕ ಪೊಲೀಸ್ ನಿರೀಕ್ಷಕರು, ಮೂವರು ಮಹಿಳಾ ಪೊಲೀಸ್ ಸಿಬ್ಬಂದಿ, ಓರ್ವ ಪುರುಷ ಸಿಬ್ಬಂದಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತಾರೆ. ಈ ಪಡೆಯು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಾರ್ಯಾಚರಿಸಲಿದೆ.

ಜನನಿಬಿಢ ಪ್ರದೇಶಗಳಲ್ಲಿ ಗಸ್ತು

ಉಡುಪಿ ನಗರದಲ್ಲಿ ಮತ್ತು ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಓಡಾಡುವ ಪ್ರದೇಶಗಳಲ್ಲಿ ಈ ರಾಣಿ ಅಬ್ಬಕ್ಕ ಪಡೆಯು ಕಾರ್ಯಾಚರಿಸುತ್ತಿರುತ್ತದೆ.
ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಉದ್ಯಾನವನ ಹಾಗೂ ವಾಕಿಂಗ್ ಪ್ರದೇಶಗಳಲ್ಲಿ ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಈ ಪಡೆಯು ಜಾಗೃತವಾಗಿದ್ದು, ಗಸ್ತು ತಿರುಗುತ್ತಿರುತ್ತದೆ.

ಈ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆ ಕೊಡುವ, ಶೋಷಣೆ ಮಾಡುವ, ಕಿರುಕುಳ ನೀಡುವ ವ್ಯಕ್ತಿಗಳು ಕಂಡು ಬಂದರೆ ಈ ಪಡೆಯು ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತದೆ. ಕ್ಷುಲ್ಲಕ ಪ್ರಕರಣಗಳು ಕಂಡುಬಂದರೆ ಪಿಟ್ಟಿ ಕೇಸುಗಳು, ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಅದಕ್ಕೆ ಸಂಬಂಧಿಸಿದ ಕೇಸು ಗಳು ಮತ್ತು ಗಂಭೀರ ಪ್ರಕರಣಗಳಿದ್ದರೆ ಕ್ರಿಮಿನಲ್ ಕೇಸುಗಳನ್ನು ಕೂಡ ಈ ಪಡೆ ದಾಖಲಿಸಿಕೊಳ್ಳಲಿದೆ.

ಪಿಂಕ್ ಬಣ್ಣದ ವಾಹನ

ಮಹಿಳಾ ಪೊಲೀಸ್ ಠಾಣೆಯ ಅಧೀನದಲ್ಲಿ ಕಾರ್ಯಾಚರಿಸಲಿರುವ ರಾಣಿ ಅಬ್ಬಕ್ಕ ಪಡೆಗೆ ಪೊಲೀಸ್ ಕ್ವಾಲಿಸ್ ವಾಹನವನ್ನು ಒದಗಿಸಲಾಗಿದೆ. ಅದಕ್ಕೆ ಮಹಿಳೆಯರ ಆಕರ್ಷಕ ಬಣ್ಣವಾಗಿರುವ ಗುಲಾಬಿ(ಪಿಂಕ್) ಬಣ್ಣವನ್ನು ಹಚ್ಚ ಲಾಗಿದೆ. ಈ ಮೂಲಕ ವಾಹನವನ್ನು ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.

ವಾಹನದ ಮೂರು ಬದಿಗಳಲ್ಲಿ ರಾಣಿ ಅಬ್ಬಕ್ಕ ಪಡೆ ಎಂಬುದಾಗಿ ಬರೆಯಲಾಗಿದ್ದು, ತುರ್ತು ದೂರಿಗಾಗಿ ಕಂಟ್ರೋಲ್ ರೂಂ ನಂಬರ್‌ಗಳಾದ 100 ಮತ್ತು 0820- 2526444 ಮತ್ತು ಉಡುಪಿ ಮಹಿಳಾ ಠಾಣೆಯ ನಂಬರ್ 0820-2525599ನ್ನು ನಮೂದಿಸಲಾಗಿದೆ. ಮಹಿಳೆಯರು ಯಾವುದೇ ಸಮಸ್ಯೆ ಎದುರಾದರೂ ಈ ನಂಬರ್‌ಗೆ ತಕ್ಷಣ ಕರೆ ಮಾಡಬಹುದಾಗಿದೆ.

‘ಈ ಪಡೆಗೆ ದೇಶದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಯಾಗಿರುವ ರಾಣಿ ಅಬ್ಬಕ್ಕರ ಹೆಸರನ್ನು ಇಡಲಾಗಿದೆ. ಈ ಕುರಿತು ಇತಿಹಾಸ ತಜ್ಞರೊಂದಿಗೆ ಚರ್ಚಿಸಿದ್ದೇನೆ. ಅವರ ಅಭಿಪ್ರಾಯದಂತೆ ಹಾಗೂ ಕರಾವಳಿ ಭಾಗದ ಶ್ರೇಷ್ಠ ಹೋರಾಟಗಾರ್ತಿಯಾಗಿರುವ ಅಬ್ಬಕ್ಕ ಹೆಸರೇ ಇದಕ್ಕೆ ಸೂಕ್ತ ಎಂಬ ನೆಲೆಯಲ್ಲಿ ರಾಣಿ ಅಬ್ಬಕ್ಕ ಪಡೆ ಎಂಬುದಾಗಿ ಹೆಸರಿಸಲಾಗಿದೆ’ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಚಿತ್ರದುರ್ಗದ ಓಬವ್ವ ಪಡೆಯಿಂದ ಪ್ರೇರಣೆ

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರೊಬೆಶನರಿ ಆಗಿದ್ದಾಗ ಚಿತ್ರದುರ್ಗ ದಲ್ಲಿ ಪೊಲೀಸ್ ಇಲಾಖೆ ರಚಿಸಿದ್ದ ಓಬವ್ವ ಪಡೆಯಿಂದ ಪ್ರೇರಣೆ ಪಡೆದ ನಿಶಾ ಜೇಮ್ಸ್, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕಿರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕೆಳದಿ ಚೆನ್ನಮ್ಮ ಪಡೆಯನ್ನು ರಚಿಸಿದ್ದರು.

ಉಡುಪಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನಿಶಾ ಜೇಮ್ಸ್, ಇಲಾಖೆಯಿಂದ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದಾಗಿ ಹೇಳಿದ್ದರು. ಅದರಲ್ಲಿ ಒಂದಾದ ಚಿತ್ರದುರ್ಗ ಹಾಗೂ ಸಾಗರದಲ್ಲಿ ಇದ್ದ ಪಡೆಯನ್ನು ಇಲ್ಲಿಯೂ ರಚಿಸುವುದಾಗಿ ತಿಳಿಸಿದ್ದರು. ಅದ ರಂತೆ ಅವರು ಇದೀಗ ಉಡುಪಿಯಲ್ಲಿ ರಾಣಿ ಅಬ್ಬಕ್ಕ ಪಡೆಯನ್ನು ರಚಿಸಿದ್ದಾರೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆ ಠಾಣೆಗೆ ಪ್ರತ್ಯೇಕ ಗಸ್ತು ವಾಹನ ಅಗತ್ಯವನ್ನು ಅರಿತುಕೊಂಡು, ರಾಣಿ ಅಬ್ಬಕ್ಕ ಪಡೆಯನ್ನು ರಚಿಸಿ ಒಂದು ವಾಹನವನ್ನು ಒದಗಿಸಲಾಗಿದೆ. ಸದ್ಯ ಇಲಾಖೆಯಲ್ಲಿ ವಾಹನದ ಕೊರತೆ ಇದ್ದು, ವಾಹನಗಳ ಅವಶ್ಯಕತೆಗೆ ತಕ್ಕಂತೆ ಮುಂದೆ ಜಿಲ್ಲೆ ಯಲ್ಲಿ ಅಗತ್ಯ ಇರುವ ಠಾಣೆಗಳಿಗೆ ಈ ಪಡೆಯನ್ನು ವಿಸ್ತರಿಸಲಾಗುವುದು.
-ನಿಶಾ ಜೇಮ್ಸ್, ಪೊಲೀಸ್ ಅಧೀಕ್ಷಕಿ, ಉಡುಪಿ ಜಿಲ್ಲೆ

ಸರ್ವ ಸನ್ನದ್ಧವಾಗಿರುವ ರಾಣಿ ಅಬ್ಬಕ್ಕ ಪಡೆಯು ಇಂದಿನಿಂದ ನಗರ ಸುತ್ತ ಲಿದೆ. ಈಗಾಗಲೇ ಗಸ್ತು ತಿರುಗುವ ಕುರಿತು ಉಡುಪಿ ಮತ್ತು ಮಣಿಪಾಲ ಗಳಲ್ಲಿ ಪಾಯಿಂಟ್ ಮಾಡಿಕೊಂಡಿದ್ದು, ಅದರಂತೆ ಪ್ರತಿದಿನ ಕಾರ್ಯಾಚರಣೆ ನಡೆಸಲಿದೆ. ಮಹಿಳೆಯರ ಸುರಕ್ಷತೆ ಮಾತ್ರವಲ್ಲದೆ, ಸಂಚಾರ ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳ ವಿರುದ್ಧವೂ ಈ ಮೂಲಕ ಕಾನೂನು ಕ್ರಮ ಜರಗಿಸಲಾಗುತ್ತದೆ.
-ರೇಖಾ ನಾಯಕ್, ಮಹಿಳಾ ಉಪನಿರೀಕ್ಷಕಿ, ಮಹಿಳಾ ಠಾಣೆ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News