×
Ad

ಕಲ್ಯಾಣ ನಿಧಿಗೆ 25ಲಕ್ಷ ರೂ. ಅನುದಾನದ ಪ್ರಸ್ತಾವನೆ: ಎಸ್ಪಿ ನಿಶಾ ಜೇಮ್ಸ್

Update: 2019-04-02 18:38 IST

ಉಡುಪಿ, ಎ.2: ನಿವೃತ್ತ ಪೊಲೀಸರಿಗೆ ವೈದ್ಯಕೀಯ ಸಹಾಯಧನ ನೀಡುವ ನಿಟ್ಟಿನಲ್ಲಿ ಕಲ್ಯಾಣ ನಿಧಿಗೆ 25ಲಕ್ಷ ರೂ. ಅನುದಾನ ಒದಗಿಸುವಂತೆ ಪೊಲೀಸ್ ಪ್ರಧಾನ ಕಚೇರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಪತ್ರ ವ್ಯವಹಾರ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಉಡುಪಿ ಪೊಲೀಸ್ ಕವಾಯತು ಮೈದಾನ(ಚಂದು ಮೈದಾನ)ದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಪೊಲೀಸರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯಕೀಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯನ್ನು ಪ್ರಾರಂಭಿ ಸಲಾಗಿದ್ದು, ಈ ಮೂಲಕ 1-2ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಯನ್ನು ಪಡೆಯ ಬಹುದಾಗಿದೆ. ಅದೇ ರೀತಿ ಮಣಿಪಾಲ ಆರೋಗ್ಯ ಕಾರ್ಡ್‌ಗಳನ್ನು ಕೂಡ ಪೊಲೀಸರಿಗೆ ವಿತರಿಸಲಾಗಿದೆ. ಪೊಲೀಸರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಧನವನ್ನು ನೀಡಲಾಗುತ್ತಿದೆ ಎಂದರು.

ಸಾರ್ವಜನಿಕರ ರಕ್ಷಣೆ ಹಾಗೂ ಶಾಂತಿಯುತ ಸಮಾಜ ನಿರ್ಮಾಣ ಮಾಡುವ ಪ್ರಮುಖ ಹೊಣೆ ಪೊಲೀಸರ ಮೇಲಿದೆ. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ ಮತ್ತು ಅನುಭವವನ್ನು ಹಂಚಿಕೊಳ್ಳಬುದಾಗಿದೆ ಎಂದು ಅವರು ಹೇಳಿದರು.

ಪೊಲೀಸರು ಸಮರ್ಪಣಾ ಮನೋಭಾವದೊಂದಿಗೆ ಆರೋಗ್ಯಕರ ಸಮಾಜ ನಿರ್ಮಿಸುವ ಕೆಲಸ ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅತಿ ಮುಖ್ಯ ವಾಗಿದೆ ಎಂದ ಅವರು, ಪೊಲೀಸರ ಮಾನಸಿಕ ಒತ್ತಡ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ. ದಿನ ಬಳಕೆ ವಸ್ತುಗಳನ್ನು ಪೊಲೀಸ್ ಕ್ಯಾಂಟಿನ್ ಮೂಲಕ ಕಡಿಮೆ ದರದಲ್ಲಿ ವಿತರಿಸ ಲಾಗುತ್ತಿದೆ ಎಂದರು.

ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಧ್ವಜ ಅನಾವರಣಗೊಳಿಸಿದ ನಿವೃತ್ತ ಪೊಲೀಸ್ ಉಪನಿರೀಕ್ಷಕ ಗೋಪಾಲ ಕೃಷ್ಣ ಮಾತನಾಡಿ, ಠಾಣೆಗೆ ಬರುವ ಸಾರ್ವಜನಿಕರ ದೂರುಗಳನ್ನು ಸಮಧಾನದಿಂದ ಆಲಿಸಿ ಕಾನೂನಾತ್ಮಕವಾಗಿ ಮಾತ್ರವಲ್ಲದೆ ಮಾನವೀಯತೆ ಆಧಾರದಲ್ಲಿಯೂ ಸ್ಪಂದಿಸುವ ಕೆಲಸವನ್ನು ಮಾಡ ಬೇಕು ಎಂದು ಹೇಳಿದರು.

ಇಂದು ಕಾನೂನು ಸುವ್ಯವಸ್ಥೆ ಕಾಪಾಡುವುದು ಬಹಳ ದೊಡ್ಡ ಸವಾಲು ಆಗಿದೆ. ಸೈನಿಕರು ಗಡಿಯ ಹೊರಗಿನ ಶತ್ರುಗಳಿಂದ ಹಾಗೂ ಪೊಲೀಸರು ದೇಶದೊಳಗಿನ ಶತ್ರುಗಳಿಂದ ದೇಶದ ನಾಗರಿಕರಿಗೆ ರಕ್ಷಣೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಪೊಲೀಸರಿಗೆ ಸಹಕಾರ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ 70 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳಿಗೆ 3,13,714ರೂ. ಕಲ್ಯಾಣ ನಿಧಿಯನ್ನು ವಿತರಿಸಲಾಯಿತು. ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಉಪಸ್ಥಿತರಿದ್ದರು. ಜಿಲ್ಲಾ ಹೆಚ್ಚು ವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ವಂದಿಸಿದರು. ಪೊಲೀಸ್ ಕಂಟ್ರೋಲ್ ರೂಂನ ಪಿಎಸ್ಸೈ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News