×
Ad

ಗಮಕಿ ಗಂಗಮ್ಮ ಕೇಶವಮೂರ್ತಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ

Update: 2019-04-02 19:16 IST

 ಉಡುಪಿ, ಎ. 2: ಬೆಂಗಳೂರಿನ ಹಿರಿಯ ಗಮಕ ಕಲಾವಿದೆ ಗಂಗಮ್ಮ ಕೇಶವಮೂರ್ತಿ ಇವರಿಗೆ 2019ನೇ ಸಾಲಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯ ಅವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಗಂಗಮ್ಮ ಕೇಶವಮೂರ್ತಿ ಇವರಿಗೆ ಎ.10ರ ಬುಧವಾರ ಅಪರಾಹ್ನ 3:15ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನವರಾದ ಗಂಗಮ್ಮ ಕೇಶವಮೂರ್ತಿ ಹೆತ್ತವರಿಂದಲೇ ಬಾಲ್ಯದಲ್ಲಿ ಗಮಕ ಕಲಿತು, ‘ಲಕ್ಷ್ಮೀಶ’ ಗಮಕ ಪಾಠಶಾಲೆಯೊಂದನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಗಮಕ ಶಿಕ್ಷಣವನ್ನು ನೀಡುತಿದ್ದಾರೆ. ಇವರು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ, ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಕರ್ನಾಟಕದಾದ್ಯಂತ ಮಾತ್ರವಲ್ಲದೆ ಮುಂಬೈ, ದೆಹಲಿ, ಬೀದರ್‌ನಿಂದ ಕಾಸರಗೋಡಿನವರೆಗೂ ಸಾವಿರಾರು ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News