×
Ad

ಹೆಣ್ಣಿನ ವಿರುದ್ಧ ವ್ಯವಸ್ಥಿತ ಪಿತೂರಿ: ಸಿ.ಕುಮಾರಿ ಆರೋಪ

Update: 2019-04-02 20:38 IST

ಕುಂದಾಪುರ, ಎ.2: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಇಂದಿಗೂ ಲಿಂಗ ತಾರತಮ್ಯ ನಡೆಯುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಮಾಡುವ ಕೃತ್ಯಗಳು ಹೆಚ್ಚುತ್ತಿವೆ. ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ಪಡುವ ಬದಲು ಅವರ ಬಗ್ಗೆ ಅಸಹ್ಯ, ಕೀಳರಿಮೆ, ಕಷ್ಟ ಎಂಬ ಭಾವನೆಯನ್ನು ಹುಟ್ಟು ಹಾಕುವ ವ್ಯವಸ್ಥಿತ ಪಿತೂರಿಗಳು ನಡೆಯು ತ್ತಿವೆ ಎಂದು ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಮಹಿಳಾ ಉಪಸಮಿತಿಯ ರಾಜ್ಯ ಸಂಚಾಲಕಿ ಸಿ.ಕುಮಾರಿ ಆರೋಪಿಸಿದ್ದಾರೆ.

ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ 109ನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಮಹಿಳಾ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು

ದೇಶಕ್ಕೆ ಸ್ವಾತಂತ್ರ್ಯ ಬಂದು 70ವರ್ಷ ಕಳೆದರೂ ಇಂದಿಗೂ ಕೂಲಿ ತಾರತಮ್ಯ, ಲಿಂಗ ತಾರತಮ್ಯ, ಹೆಣ್ಣು ಗಂಡು ಎಂಬ ಭೇದ-ಭಾವ ಜೀವಂತವಾಗಿದೆ. ಹೆಣ್ಣು ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿದರೂ ಕೂಡ ಇಂದು ಹೆಣ್ಣನ್ನು ಎರಡನೇ ದರ್ಜೆಯ ನಾಗರಿಕಳನ್ನಾಗಿ ನೋಡುತ್ತಿರುವುದು ದುರಂತ ಎಂದರು.

ಮಹಿಳೆಯರ ರಕ್ಷಣೆಗೆ ಸರಕಾರಗಳು ಮುಂದಾಗುತ್ತಿಲ್ಲ. ಆದುದರಿಂದ ಲೈಂಗಿಕ ಶೋಷಣೆ, ಕಿರುಕುಳ, ಅತ್ಯಾಚಾರಗಳ ವಿರುದ್ದ ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಣ್ಣನ್ನು ವಿಕೃತವಾಗಿ ನೋಡುವ ಮನಸ್ಸುಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ತಿಳಿಸಿದರು.

ಇಂದಿನ ಬೆಲೆ ಏರಿಕೆಗನುಗುಣವಾಗಿ ವೇತನವೂ ಹೆಚ್ಚಾಗಿಲ್ಲ. ಮರಳು ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಕಟ್ಟಡ ಕಾರ್ಮಿಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕಟ್ಟಡ ಕಾರ್ಮಿಕರ ತಲಾ ಆದಾಯ ಜಾಸ್ತಿಯಾಗದೆ ಈ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ದೇಶಕ್ಕೆ ಮೋಸ ಮಾಡಿ ಹೋದ ಉದ್ಯಮಿ ಪತಿಗಳ ಆದಾಯ ದುಪ್ಪಟ್ಟು ಹೆಚ್ಚಾಗಿದೆ ಎಂದು ಅವರು ಟೀಕಿಸಿದರು.

ಈ ದೇಶದಲ್ಲಿ ರಿಲಾಯನ್ಸ್, ಅಂಬಾನಿ, ಅದಾನಿಯಂತಹ ಬಂಡವಾಳ ಶಾಹಿಗಳ ಅಭಿವೃದ್ದಿಯಾಗುತ್ತಿದೆಯೇ ಹೊರತು ದುಡಿಯುವ ಜನರ, ಶ್ರಮ ಜೀವಿಗಳ, ಕಟ್ಟಡ ಕಾರ್ಮಿಕರ ಅಭಿವೃದ್ದಿಯಾಗುತ್ತಿಲ್ಲ. ಹೀಗೆ ನಮ್ಮನ್ನು ಆಳುವ ಸರಕಾರಗಳು ಶ್ರೀಮಂತರ ಪರವಾಗಿ ಆಡಳಿತ ನಡೆಸುತ್ತಿವೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಕಾರ್ಮಿಕರ ಬೇಡಿಕೆಗಳ ಕಾರ್ಮಿಕರ ಸನ್ನದು ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ಅಧ್ಯಕ್ಷತೆಯನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಯು.ದಾಸಭಂಡಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕಟ್ಟಡ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೂಲಿಕಾರರ ಸಂಘದ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಕಟ್ಟಡ ಕಾರ್ಮಿಕ ಸಂಘದ ಗಣೇಶ್ ತೊಂಡೆಮಕ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News