ಲೋಕಸಭಾ ಚುನಾವಣೆ: ಉಡುಪಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು
ಉಡುಪಿ, ಎ.2: ಮುಂಬರುವ ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ಪಕ್ಷಗಳು, ಪಕ್ಷೇತರರು ಹಾಗೂ ವ್ಯಕ್ತಿಗಳು ಖಾಸಗಿ ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಮತ್ತು ಕಾರ್ಯಕ್ರಮ ನಡೆಸುವ ಪೂರ್ವದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಯಿಂದ ಅನುಮತಿ ಪಡೆದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಮತ್ತು ಅನುಮತಿ ಪತ್ರದಲ್ಲಿ ವಿಧಿಸಿದ ಷರತ್ತಿನಂತೆ ಕಾರ್ಯಕ್ರಮವನ್ನು ನಡೆಸಬೇಕು ಎಂದು ಉಡುಪಿ ವಿಧಾನಸಬಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ನಗರ ವ್ಯಾಪ್ತಿಯ ರಾಯಲ್ ಗಾರ್ಡನ್‌ನಲ್ಲಿ ಸಹಬಾಳ್ವೆ ಕಾರ್ಯಕ್ರಮದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ದ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಮಾ.19ರಂದು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಮಲ್ಪೆ ವ್ಯಾಪ್ತಿಯಲ್ಲಿ ಡಿ.ಜೆ ಬಳಸಿ ಕಾರ್ಯಕ್ರಮ ನಡೆಸಿದ್ದು, ಕಾರ್ಯಕ್ರಮದ ಆಯೋಜಕರಾದ ಅಭಿರಾಜ್ ವಿರುದ್ಧ ಮಲ್ಪೆ ಪೋಲಿಸ್ ಠಾಣೆಯಲ್ಲಿ ಮಾ.21ರಂದು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿದೆ.
ರೂಮನ್ ಟೆಕ್ನಲಾಜಿಸ್ಟ್ ಮಣಿಪಾಲ ಇವರು ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಈ ಸಂಸ್ಥೆಯ ವಿರುದ್ಧವೂ ಮಣಿಪಾಲ ಪೋಲಿಸ್ ಠಾಣೆಯಲ್ಲಿ ಮಾ.28ರಂದು ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಪಕ್ಷೇತರ ಅಭ್ಯರ್ಥಿ ಅಮೃತ ಶೆಣೈ ಇವರು ಯಾವುದೇ ಪೂರ್ವಾನುಮತಿ ಪಡೆಯದೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವುದರಿಂದ, ಈ ಬಗ್ಗೆ ಸಮಜಾಯಿಷಿ ನೀಡುವಂತೆ ಮಾ.30ರಂದು ನೋಟಿಸು ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಮತ್ತಿತರ ಪಕ್ಷದ ಸದಸ್ಯರು ಯಾವುದೇ ಪೂರ್ವಾನುಮತಿ ಇಲ್ಲದೆ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದು, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಮಾ.31ರಂದು ದೂರು ದಾಖಲಿಸಲಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.