×
Ad

ಟಿಪ್ಪು ಜಯಂತಿ ವಿರುದ್ಧ ಹೇಳಿಕೆಯೂ ಪಕ್ಷ ವಿರೋಧಿ ಚಟುವಟಿಕೆ: ಅಮೃತ್ ಶೆಣೈ

Update: 2019-04-02 22:03 IST

ಉಡುಪಿ, ಎ. 2: ಮಂತ್ರಿಯಾಗಿದ್ದ ಪ್ರಮೋದ್ ಮಧ್ವರಾಜ್ ರಾಜ್ಯ ಸರಕಾರ ಆಚರಿಸಿದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳದೆ, ನಂತರ ಟಿಪ್ಪು ಜಯಂತಿ ವಿರುದ್ದ ಹೇಳಿಕೆ ನೀಡಿರುವುದು ಕೂಡ ಪಕ್ಷ ವಿರೋಧಿ ಚಟುವಟಿಕೆಯೇ ಆಗು ತ್ತದೆ. ನನ್ನದು ಪಕ್ಷ ವಿರೋಧಿ ಚಟುವಟಿಕೆಯಾದರೆ ಈ ವಿಚಾರ ಕೂಡ ಚರ್ಚೆಗೆ ಬರಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ.

ಉಡುಪಿ ಪಿಪಿಸಿ ರಸ್ತೆಯಲ್ಲಿರುವ ತನ್ನ ಚುನಾವಣಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಅವರು, ಅದೇ ರೀತಿ ಬಿಜೆಪಿಗೆ ಹೋಗುವು ದಾಗಿ ಹೇಳುವುದು ಕೂಡ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಹೀಗೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಕಾಂಗ್ರೆಸ್ ಈವರೆಗೆ ನೋಟೀಸ್ ಕೂಡ ನೀಡಿಲ್ಲ, ಉಚ್ಛಾಟನೆಯೂ ಮಾಡಿಲ್ಲ ಎಂದು ಟೀಕಿಸಿದರು.

ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಕುರಿತು ಈವರೆಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ನಾನು ಗೊಂದಲದಲ್ಲಿದ್ದೇನೆ. ನಾನು ಸ್ಪರ್ಧೆ ಮಾಡುತ್ತಿರುವುದು ಜೆಡಿಎಸ್ ಅಭ್ಯರ್ಥಿಯ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ. ಹೀಗಾಗಿ ನನ್ನದ್ದು ಪಕ್ಷ ವಿರೋಧಿ ಚಟುವಟಿಕೆ ಎಂದು ನಾನು ಒಪ್ಪಲ್ಲ. ಒಂದು ವೇಳೆ ನನ್ನ ಮನಸ್ಸಿಗೆ ಹಾಗೆ ಅನಿಸಿದರೆ ಅದೇ ದಿನ ನಾನು ರಾಜೀನಾಮೆ ನೀಡುತ್ತೇನೆ ಎಂದರು.

ಮತದಾರರಿಗೆ ಗೊಂದಲ ಉಂಟಾಗುವುದರಿಂದ ಎಐಸಿಸಿಗೆ ರಾಜೀನಾಮೆ ನೀಡುವ ಬಗ್ಗೆ ಸದ್ಯವೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದ ಅವರು, ಮುಂದೆ ಕಾಂಗ್ರೆಸ್ ಸೇರಬೇಕೆ ಬೇಡವೇ ಎಂಬುದನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಜನರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಗೆದ್ದು ಸಂಸದನಾದರೆ ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಶಕ್ತಿಗಳ ವಿರುದ್ಧ ಉಗ್ರ ಹೋರಾಟ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಜೊತೆ ಸಾಮಾಜಿಕ ಸಾಮರಸ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ. ತಿಂಗಳಿಗೊಮ್ಮೆ ಎರಡು ಜಿಲ್ಲೆಗಳ ಸಮಸ್ತ ಸಮುದಾಯಗಳ, ಉದ್ಯಮಿಗಳ, ಛೇಂಬರ್ ಆಫ್ ಕಾಮರ್ಸ್, ಬಿಲ್ಡರ್ಸ್‌, ವಿದ್ಯಾರ್ಥಿಗಳ ಸಭೆ ಕರೆದು ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಪ್ರತಿಯೊಂದು ನಿರ್ಧಾರವನ್ನು ಮತದಾರರ ಮುಂದೆ ಇಟ್ಟು ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಜಯಶ್ರೀ ಭಟ್, ಅನಿತಾ ಡಿಸೋಜ, ಶಾಹಿದ್ ಅಲಿ, ಅನ್ಸಾರ್ ಅಹ್ಮದ್, ಕೃಷ್ಣಪ್ಪ ಉಪ್ಪೂರು, ವರದರಾಜ್, ಅಹ್ಮದ್ ನೇಜಾರ್, ಕಿಶೋರ್ ಶೆಟ್ಟಿ, ರಫೀಕ್ ಕಲ್ಯಾಣಪುರ, ಯಜ್ಞೇಶ್ ಆಚಾರ್ಯ, ಇಸುಬು, ರಾಜಗೋಪಾಲ್ ರೈ, ಸಿರಾಜ್, ಅಮೀರ್ ಬೆಳಪು, ಯೋಗೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಚುನಾವಣಾ ಆಯೋಗ ನೋಟೀಸ್ 

ಚುನಾವಣೆಯಲ್ಲಿ ಹಣ ಹಂಚುವುದು ಅಪರಾಧವೇ ಹೊರತು ಜನರಿಂದ ಹಣ ಪಡೆಯುವುದು ಅಪರಾಧ ಅಲ್ಲ. ನಾವು ಇತ್ತೀಚೆಗೆ ಚುನಾವಣಾ ದೇಣಿಗೆ ಸಂಗ್ರಹ ಮಾಡಿರುವ ಬಗ್ಗೆ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದೆ. ನಾನು ನನ್ನ ಹಣ ವ್ಯಯ ಮಾಡಿ ಮುಂದೆ ಭ್ರಷ್ಟಾಚಾರಿ ಆಗಬಾರದೆಂಬ ಉದ್ದೇಶ ದಿಂದ ಜನರಿಂದಲೇ ಹಣ ಸಂಗ್ರಹಿಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅಮೃತ್ ಶೆಣೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News