×
Ad

ನಾಲ್ವರು ಅಂತರ್‌ ರಾಜ್ಯ ದರೋಡೆಕೋರರ ಬಂಧನ

Update: 2019-04-02 22:15 IST

ಉಡುಪಿ, ಎ.2: ದರೋಡೆಗೆ ಸಂಚು ಹೂಡುತ್ತಿದ್ದ ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಉಡುಪಿ ಪೊಲೀಸರು ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಎ.2ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನ ಶ್ಯಾಮ್, ವೆಂಕಟೇಶ ಯಾನೆ ವೆಂಕಟ್, ರಾಕೇಶ್ ಯಾನೆ ರಾಕೇಶ್ ಕುಮಾರ್, ಗೋಪಿ ಬಂಧಿತ ಆರೋಪಿಗಳು. ಈ ತಂಡದ ಮತ್ತೋರ್ವ ಆರೋಪಿ ಪರಮಶಿವ ಯಾನೆ ಮೇಶ ಎಂಬಾತ ಪರಾರಿಯಾಗಿದ್ದಾನೆ.

ಇವರು ಬೈಕಿನಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ತಂಡ, ದಾಳಿ ನಡೆಸಿ ಐವರ ಪೈಕಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇವರು ರಸ್ತೆಯಲ್ಲಿ ಹಣದೊಂದಿಗೆ ಹೋಗುವ ಜನರ ಮೈಮೇಲೆ ತಮ್ಮಲ್ಲಿರುವ ತುರಿಕೆ ಹುಡಿಯನ್ನು ಹಾಕಿ ಅಥವಾ ಸ್ಲಿಂಗ್ ಶಾಟ್‌ನಿಂದ ಬೇರಿಂಗ್ ಬಾಲ್‌ಗಳನ್ನು ಪ್ರಯೋಗಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆದು ದರೋಡೆ ಮಾಡುವ ಅಥವಾ ಜನರಿಗೆ ಹಲ್ಲೆ ನಡೆಸಿ ಅವರಲ್ಲಿರುವ ಹಣವನ್ನು ದೋಚುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾರೆಂದು ವಿಚಾರಣೆಯಿಂದ ತಿಳಿದುಬಂದಿದೆ.

ಬಂಧಿತರಿಂದ ಒಂದು ಫೇಸ್‌ಮಾಸ್ಕ್, ಒಂದು ಬ್ಯಾಗ್, ಒಟ್ಟು 5 ಮೊಬೈಲ್ಗಳು, ಒಂದು ಸ್ಲಿಂಗ್ ಶಾಟ್, 25 ಬೇರಿಂಗ್ ಬಾಲ್, ತುರಿಕೆ ಹುಡಿ, ಮೂರು ಬೈಕ್‌ಗಳ ನಂಬರ್ ಪ್ಲೇಟ್‌ಗಳು, ಐದು ಐಡೆಂಟಿಟಿ ಕಾರ್ಡ್‌ಗಳು, ಎರಡು ಆಧಾರ್ ಕಾರ್ಡ್‌ಗಳು, ಆರು ವಿವಿಧ ಬೈಕ್‌ಗಳ ದಾಖಲೆ ಪ್ರತಿಗಳು ಮತ್ತು ಮೂರು ಬೈಕ್ಗಳನ್ನು ವಶಪಡಿಸಿಕೊಳ್ಟಳಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಇವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಇವರು ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಆ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News