ಕಾಂಗ್ರೆಸ್‍ನಿಂದ ಮೋದಿಗೆ ಪರೋಕ್ಷ ಬೆಂಬಲ: ಲಾಲಾಜಿ ಮೆಂಡನ್

Update: 2019-04-02 17:08 GMT

ಪಡುಬಿದ್ರಿ: ಕಾಂಗ್ರೆಸ್ ಪಕ್ಷ ಈ ಬಾರಿ ಅಭ್ಯರ್ಥಿಯನ್ನೇ ಕಣಕ್ಕಿಳಿಸದೇ ಚುನಾವಣಾ ಪೂರ್ವದಲ್ಲೇ ಶಸ್ತ್ರ ತ್ಯಾಗ ಮಾಡುವ ಮೂಲಕ ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಲು ಪರೋಕ್ಷ ಬೆಂಬಲ ನೀಡಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಭಿಪ್ರಾಯಪಟ್ಟರು.

ಕಾಪು ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ಆಧಾರದಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡನೇ ಅತೀ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು, ಕನಿಷ್ಟ ಒಬ್ಬನೇ ಒಬ್ಬ ಗ್ರಾ.ಪಂ. ಸದಸ್ಯನನ್ನೂ ಹೊಂದಿರದ ಜೆಡಿಎಸ್ ಪಕ್ಷಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುವ ಮೂಲಕ ತನ್ನ ಸೋಲೊಪ್ಪಿಕೊಂಡಿದೆ ಎಂದರು.

ಬಿಜೆಪಿ ಜಯ ನಿಶ್ಚಿತ :  ಅತೀ ಹೆಚ್ಚು ಅನುದಾನವನ್ನು ತರಿಸುವ ಮೂಲಕ ಅತೀ ಹೆಚ್ಚು ಅನುದಾನ ತರಿಸಿದ ಸಂಸದರ ಪೈಕಿ ಮೂರನೇ ಸ್ಥಾನ ಶೋಭಾ ಕರಂದ್ಲಾಜೆ ಗಳಿಸಿದಾರೆ. 3,700 ಕೋ. ರೂ. ಅನುದಾನದಲ್ಲಿ 1,700 ಕೋ. ರೂ. ಅನುದಾನವನ್ನು ಉಡುಪಿ ಜಿಲ್ಲೆಗೆ ಒದಗಿಸಿದ್ದಾರೆ. ಇದನ್ನೇ ಆಧಾರ ವಾಗಿಟ್ಟುಕೊಂಡು ನಾವು ಮತಯಾಚನೆ ನಡೆಸುತ್ತಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವುದು ನಿಶ್ಚಿತ ಎಂದರು.

ದಾಖಲೆಯೊಂದಿಗೆ ಮಾತನಾಡಲಿ: ಮಲ್ಪೆಯ ಏಳು ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಮೀನುಗಾರರ ನಾಪತ್ತೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.  ನಾಪತ್ತೆಯಾದವರ ಕುಟುಂಬದವರ ಜೊತೆಗೆ ಮತ್ತು ಮೀನುಗಾರರ ಜೊತೆಗೆ ಸ್ವತಃ ಕೇಂದ್ರ ರಕ್ಷಣಾ ಸಚಿವರೇ ಬಂದು ಮಾತುಕತೆ ನಡೆಸಿದ್ದಾರೆ. ಅನಗತ್ಯ ಆರೋಪ ಮಾಡುವವರು ದಾಖಲೆ ಸಹಿತವಾಗಿ ಮಾತನಾಡಲಿ, ಅದು ಬಿಟ್ಟು ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.

ಬ್ಯಾಂಕ್ ವಿಲೀನದಿಂದ ಇನ್ನಷ್ಟು ಸೇವೆ: ಬ್ಯಾಂಕ್ ಆಫ್ ಬರೋಡಾದ ಜೊತೆಗೆ ವಿಜಯ ಬ್ಯಾಂಕ್ ವಿಲೀನಗೊಂಡಿರುವುದು ನಮ್ಮ ಸರ್ಕಾರದ ಯೋಜನೆ ಯಲ್ಲ. ಅದು ಹಿಂದಿನ ಸರ್ಕಾರದ ಪ್ರಯತ್ನದ ಫಲವಾಗಿದೆ. ವಿಜಯಾ ಬ್ಯಾಂಕ್‍ನ್ನು ಉಳಿಸಿಕೊಳ್ಳಲು ನಾವು ಕೂಡಾ ಪ್ರಯತ್ನ ಪಟ್ಟಿದ್ದೇವೆ. ಆದರೆ ಸಾಧ್ಯವಾಗಿಲ್ಲ. ವಿಜಯಾ ಬ್ಯಾಂಕ್‍ನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಬ್ಯಾಂಕ್‍ನ ಹೊಂದಾಣಿಕೆಯಾಗಿದೆ. ಆ ಮೂಲಕ ಗ್ರಾಮೀಣ ಜನರಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಬ್ಯಾಕಿಂಗ್ ಸೇವೆ ಲಭಿಸುವ ವಿಶ್ವಾಸವಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೈ ಹೂ ಚೌಕಿದಾರ್ ಎಂಬ ಘೋಷಣೆಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಚೌಕಿದಾರ್ ಚೋರ್ ಹೈ ಎಂಬ ಘೋಷಣೆ ಕೂಗುತ್ತಾ, ಅದರ ಬಗ್ಗೆ ಸ್ಟಿಕ್ಕರ್ ಬಿಡುಗಡೆಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದೊಳಗೇ ಅಸಮಾಧಾನದ ಕಿಡಿ ಹೊತ್ತಿದೆ. ಈ ಘೋಷಣೆಯ ಮತದಾರರು ತಾವಾಗಿಯೇ ಸ್ವತಃ ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರ ಈ ಘೋಷಣೆಯು ಅವರಿಗೇ ತಿರುವು ಮುರುವಾಗಲಿದೆ. ಇದರಿಂದ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಭಾರೀ ನಷ್ಟವಾಗಲಿದೆ ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಚುನಾವಣಾ ಉಸ್ತುವಾರಿ ವಿಜಯ್ ಕೊಡವೂರು, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪುರಸಭಾ ವ್ಯಾಪ್ತಿ ಬಿಜೆಪಿ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಪುರಸಭಾ ಸದಸ್ಯರಾದ ಕಿರಣ್ ಆಳ್ವ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News