ಆರ್‌ಬಿಐ ಅಧಿಸೂಚನೆ ಅಸಾಂವಿಧಾನಿಕ: ಸುಪ್ರೀಂಕೋರ್ಟ್

Update: 2019-04-02 17:20 GMT

ಹೊಸದಿಲ್ಲಿ,ಎ.2: ಒಂದು ದಿನದ ಮಟ್ಟಿಗೆ ಸಾಲ ಬಾಕಿಯಾದರೂ ಅಂಥ ಖಾತೆಗಳನ್ನು ವಸೂಲಾಗದ ಸಾಲದ ಖಾತೆ ಎಂದು ವರ್ಗೀಕರಿಸಲಾಗುವುದು ಎಂಬ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಸೂಚನೆಯನ್ನು ಮಂಗಳವಾರ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಈ ಅಧಿಸೂಚನೆ ಅಸಾಂವಿಧಾನಿಕ ಮತ್ತು ಆರ್‌ಬಿಐಯ ಕಾನೂನು ಮಿತಿಗಿಂತ ಮಿಗಿಲಾಗಿದೆ ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿದೆ.

ಆರ್‌ಬಿಐ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿಗಳನ್ನು ಆಲಿಸಿದ ನ್ಯಾಯಾಧೀಶರಾದ ರೊಹಿಂಟನ್ ಫಾಲಿ ನಾರಿಮನ್ ಮತ್ತು ವಿನೀತ್ ಸರನ್ ಅವರ ಪೀಠ ಈ ಆದೇಶ ನೀಡಿದೆ. ಸಾಲ ಪಾವತಿಯಲ್ಲಿ ವಿಳಂಬವಾಗಿರುವ ಕಾರಣಕ್ಕೆ 75ಕ್ಕೂ ಅಧಿಕ ಕಂಪೆನಿಗಳು ದಿವಾಳಿತನದ ಪ್ರಕ್ರಿಯೆಗೆ ಒಳಗಾಗುವ ಅಪಾಯದಲ್ಲಿವೆ.

2018ರ ಫೆಬ್ರವರಿಯಲ್ಲಿ ಮರುಪಾವತಿಯಾಗದ ಸಾಲಗಳ ವರ್ಗೀಕರಣದ ಅಧಿಸೂಚನೆಯನ್ನು ಹೊರಡಿಸಿದ ಆರ್‌ಬಿಐ, 2,000 ಕೋಟಿ ರೂ. ಗೂ ಅಧಿಕ ಸಾಲ ಹೊಂದಿರುವ ಖಾತೆಗಳನ್ನು 180 ದಿನಗೊಳಗಾಗಿ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಂಥ ಖಾತೆಗಳನ್ನು ದಿವಾಳಿತನ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ತಿಳಿಸಿತ್ತು. ಈ ಅಧಿಸೂಚನೆಯಿಂದ ಅನೇಕ ಕಂಪೆನಿಗಳು, ಮುಖ್ಯವಾಗಿ ವಿದ್ಯುತ್ ಕ್ಷೇತ್ರದ ಕಂಪೆನಿಗಳು ಗೊಂದಲಕ್ಕೀಡಾಗಿದ್ದವು. ತನ್ನ ನಿಬಂಧನೆಗಳನ್ನು ಸಡಿಲಗೊಳಿಸುವಂತೆ ಕೈಗಾರಿಕೆಗಳು ಮತ್ತು ಸರಕಾರ ಆರ್‌ಬಿಐಗೆ ಮನವಿ ಮಾಡಿದ್ದವು ಮತ್ತು ಇದಕ್ಕೆ ಸಂಬಂಧಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲೂ ಮನವಿ ಸಲ್ಲಿಸಿತ್ತು. ಅದಕ್ಕೆ ಪ್ರತಿಯಾಗಿ ನ್ಯಾಯಾಲಯ, ಸರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸೆಕ್ಷನ್ 7ನ್ನು ಅನ್ವಯಿಸಿ ಈ ಆದೇಶವನ್ನು ಬದಲಾಯಿಸಬಹುದು ಎಂದು ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News