ನಿಮಗೆ ತಿಳಿದಿರುವ ವಿಚಾರದ ಬಗ್ಗೆ ಮಾತ್ರ ಮಾತನಾಡಿ: ಗಂಭೀರ್ ಗೆ ಉಮರ್ ಅಬ್ದುಲ್ಲಾ ತರಾಟೆ

Update: 2019-04-02 17:26 GMT

ಹೊಸದಿಲ್ಲಿ, ಎ. 2: ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಕುರಿತ ಚರ್ಚೆಗೆ ಇಳಿದಿರುವ ಬಿಜೆಪಿ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಉಮರ್ ಅಬ್ದುಲ್ಲಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮಗೆ ತಿಳಿದಿರುವ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿ ಎಂದು ಉಮರ್ ಅಬ್ದುಲ್ಲಾ ಅವರು ಗೌತಮ್ ಗಂಭೀರ್‌ಗೆ ಕಿವಿಮಾತು ಹೇಳಿದ್ದಾರೆ.

ಎ35ಎ ಕಾಯ್ದೆ ಬದಲಾಯಿಸಲು ಪ್ರಯತ್ನಿಸಿದರೆ, ರಾಜ್ಯಕ್ಕೆ ಪ್ರಧಾನಿ ಹಾಗೂ ವರಿಷ್ಠರನ್ನು ಆಗ್ರಹಿಸಲಾಗುವುದು ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೀಡಿದ ಹೇಳಿಕೆ ಬಗ್ಗೆ ಗೌತಮ್ ಗಂಭೀರ್ ವ್ಯಂಗ್ಯವಾಡಿದ್ದರು.

ಇಂದು ಅಪರಾಹ್ನ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, “ಉಮರ್ ಅಬ್ದುಲ್ಲಾ ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯನ್ನು ಬಯಸುತ್ತಿದ್ದಾರೆ. ನಾನು ಸಾಗರದ ಮೇಲೆ ನಡೆಯಲು ಬಯಸುತ್ತೇನೆ. ಉಮ್ಮರ್ ಅಬ್ದುಲ್ಲಾ ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯನ್ನು ಬಯಸುತ್ತಾರೆ. ನಾನು ಹಂದಿಗಳು ಹಾರಾಡಬೇಕೆಂದು ಬಯಸುತ್ತೇನೆ” ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿರುವ ಉಮ್ಮರ್ ಅಬ್ದುಲ್ಲಾ, “ನಾನು ಕ್ರಿಕೆಟ್ ತುಂಬಾ ಚೆನ್ನಾಗಿ ಆಡಲಾರೆ ಎಂದು ನನಗೆ ಗೊತ್ತು. ಆದುದರಿಂದ ನಾನು ಎಂದಿಗೂ ಹೆಚ್ಚು ಕ್ರಿಕೆಟ್ ಆಡಿಲ್ಲ. ನಿಮಗೆ ಜಮ್ಮು ಹಾಗೂ ಕಾಶ್ಮೀರದ ಬಗ್ಗೆ, ಅದರ ಚರಿತ್ರೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದುದರಿಂದ ನಿಮಗೆ ಗೊತ್ತಿರುವ ಬಗ್ಗೆ ಮಾತ್ರ ಮಾತನಾಡಿ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News