ಮಂಗಳೂರು: ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ‘ಮೈತ್ರಿ’ ಪಕ್ಷದ ಚಿಹ್ನೆಯೇ ಇಲ್ಲ !

Update: 2019-04-03 13:09 GMT

ಮಂಗಳೂರು, ಎ. 3: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ನಗರದ ಬೆಂದೂರ್ ವೆಲ್ ಬಳಿಯ ನಿರ್ಮಾಣ ಹಂತದ ಖಾಸಗಿ ಕಟ್ಟಡವೊಂದರಲ್ಲಿ ತೆರೆಯಲ್ಪಟ್ಟ ಕಚೇರಿಯಲ್ಲಿ ‘ಮೈತ್ರಿ ಪಕ್ಷ’ದ ಚಿಹ್ನೆ ಇಲ್ಲದಿರುವ ಬಗ್ಗೆ ಜೆಡಿಎಸ್ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿವೆ.

ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಅದರಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ನೀಡಿವೆ. ಈಗಾಗಲೆ ಎರಡೂ ಪಕ್ಷಗಳ ನಾಯಕರನ್ನು ಒಳಗೊಂಡ ಜಂಟಿ ಸಮಿತಿಯೊಂದನ್ನೂ ರಚಿಸಲಾಗಿದೆ. ಒಂದೆರಡು ಜಂಟಿ ಸುದ್ದಿಗೋಷ್ಟಿಯೂ ನಡೆದಿದೆ. ಚುನಾವಣಾ ಕಚೇರಿಯ ಉದ್ಘಾಟನೆಯ ಸಂದರ್ಭ ಜೆಡಿಎಸ್ ವರಿಷ್ಠರಾದ ಎಚ್. ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮತ್ತಿತರರ ಭಾವಚಿತ್ರವುಳ್ಳ ಕಟೌಟ್-ಬ್ಯಾನರ್ ಕೂಡ ಕಂಡು ಬಂದಿತ್ತು. ಆದರೆ ಬಳಿಕ ಅವು ನಾಪತ್ತೆಯಾಗಿವೆ. ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಿಥುನ್ ರೈ ಅವರ ಭಾವಚಿತ್ರವುಳ್ಳ ಬ್ಯಾನರ್ ಚುನಾವಣಾ ಕಚೇರಿಯಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಜೆಡಿಎಸ್ ಪಕ್ಷದ ಹೆಸರಾಗಲಿ, ಚಿಹ್ನೆಯಾಗಲಿ, ನಾಯಕರ ಭಾವಚಿತ್ರವಾಗಲಿ ಇಲ್ಲ. ಬದಲಾಗಿ ಅಭ್ಯರ್ಥಿಯ ಹೆಸರು ಮತ್ತು ಕಾಂಗ್ರೆಸ್ ಚಿಹ್ನೆ ಮಾತ್ರವಿದೆ. ಅಲ್ಲದೆ ‘ಮೈತ್ರಿ’ ಪಕ್ಷದ ಅಭ್ಯರ್ಥಿ ಎಂದಷ್ಟೇ ನಮೂದಿಸಲಾಗಿದೆ. ಆದರೆ ಮೈತ್ರಿ ಪಕ್ಷ ಯಾವುದು ಎಂಬುದನ್ನೂ ಸ್ಪಷ್ಪಪಡಿಸಿಲ್ಲ.

ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಷ್ಟೇನೂ ನೆಲೆ ಇಲ್ಲದ ಕಾರಣ ಕಾಂಗ್ರೆಸ್ಸಿಗರು ಜೆಡಿಎಸ್‌ಗೆ ಹೆಚ್ಚು ಮಹತ್ವ ನೀಡುತ್ತಿಲ್ಲವೇನೋ ಎಂಬ ಮಾತು ಕೂಡ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ದಕ್ಷಿಣ ಕನ್ನಡದಲ್ಲಿ ‘ಮೈತ್ರಿ’ ಹೆಸರಿಗೆ ಮಾತ್ರ ಎಂಬಂತೆ ಭಾಸವಾಗುತ್ತಿದೆ.

ಕೇಸರಿ ಶಾಲು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಿಥುನ್ ರೈ ಚುನಾವಣಾ ಪ್ರಚಾರದ ಸಂದರ್ಭ ಬಳಸುವ ಕೇಸರಿ ಶಾಲಿನ ಬಗ್ಗೆಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಎಸ್‌ಡಿಪಿಐ ಕಾರ್ಯಕರ್ತರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಇದು ಮಿಥುನ್ ರೈ ಮೃದು ಹಿಂದುತ್ವಕ್ಕೆ ಸಾಕ್ಷಿ’ ಎಂದು ವ್ಯಂಗ್ಯವಾಡುತ್ತಿದ್ದಾರೆ. ಕಾಂಗ್ರೆಸ್‌ನ ಬಹುತೇಕ ನಾಯಕರ ಹೆಗಲಲ್ಲಿ ಪಕ್ಷದ ಚಿಹ್ನೆಯುಳ್ಳ ಶಾಲು ಕಂಡು ಬಂದರೆ, ಮಿಥುನ್ ರೈಯ ಶಾಲು ಯಾಕೆ ಕೇಸರಿಮಯವಾಯಿತು ಎಂದು ಪ್ರಶ್ನಿಸತೊಡಗಿದ್ದಾರೆ. 

ಉಡುಪಿ-ಚಿಕ್ಕಮಗಳೂರು ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್-ಜೆಡಿಎಸ್ ಚಿಹ್ನೆಯುಳ್ಳ ಶಾಲನ್ನು ಬಳಸಿಕೊಂಡರೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಯಾಕೆ ಕೇಸರಿ ಶಾಲು ಬಳಸುತ್ತಿದ್ದಾರೆ ಎಂದೂ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಅಭ್ಯರ್ಥಿ ಎಡವಟ್ಟುಗಳನ್ನು ಮಾಡುತ್ತಲೇ ಇದ್ದಾರೆ. ಸೂಕ್ಷ್ಮ ಮತ್ತು ಪ್ರಜ್ಞಾವಂತ ಮತದಾರರು ಇದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ಸುದ್ದಿಗೆ ಗ್ರಾಸ ಒದಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News