ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ: ಪುಚ್ಚಮೊಗೆರು ಸೇತುವೆ ಬಳಿಯ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

Update: 2019-04-03 13:40 GMT

ಬಂಟ್ವಾಳ, ಮಾ. 3: ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಲಮೂಲವಾದ ಫಲ್ಗುಣಿ ನದಿಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಪುಚ್ಚಮೊಗೆರು ಸೇತುವೆ ಬಳಿಯ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹೇಶ್ ಅವರು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಪರಿಶೀಲನೆ ನಡೆಸಿದರು.

ಈ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್. ರಾಜಣ್ಣ, ಕುಡಿಯುವ ನೀರು ಸರಬರಾಜು ವಿಭಾಗದ ಇಂಜಿನಿಯರುಗಳು ಮತ್ತಿತರರು ಹಾಜರಿದ್ದು, ಪೂರಕ ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಕುರಿತು ಪರಿಶೀಲನೆ ನಡೆಸಿದ್ದೇವೆ. ಈ ಕುರಿತು ತುರ್ತು ಪರಿಹಾರಕ್ಕೆ ಪಿಡಿಒಗಳ ಸಭೆಯೊಂದನ್ನು ಕರೆಯಲಿದ್ದು, ಈಗಿರುವ ಸಂಪನ್ಮೂಲಗಳ ಸದ್ಬಳಕೆ ಮಾಡಿ ನೀರೊದಗಿಸುವ ಕಾರ್ಯ ನಡೆಸಲಿದ್ದೇವೆ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರ ಗಮನಕ್ಕೂ ಪರಿಸ್ಥಿತಿಯನ್ನು ತರಲಾಗಿದೆ ಎಂದು ಮಾಹಿತಿ ನೀಡಿದರು.

ಬೋರ್‍ವೆಲ್ ಸಹಿತ ಲಭ್ಯ ಸಂಪನ್ಮೂಲಗಳನ್ನು ಉಪಯೋಗಿಸಿ, ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಕ್ರಮ ಕೈಗೊಳ್ಳಲಾಗುವುದು. ನದಿಯಲ್ಲಿ ನೀರಿನ ಕೊರತೆ ಹಾಗೂ ಅಂತರ್ಜಲ ಕುಸಿಯದಂತೆ ಜಲಜಾಗೃತಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ ಜಾರಿಗೊಂಡಿರುವ ಜಲಾಮೃತ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಇದರ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಲಾಗುವುದು ಎಂದು ಹೇಳಿದರು.

'ಸಂಗಬೆಟ್ಟು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ' ಶೀರ್ಷಿಕೆಯಡಿ ಹಾಗೂ 'ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಫಲ್ಗುಣಿ ನದಿ' ಎಂಬ ಉಪಶೀರ್ಷಿಕೆಯಡಿ ಫಲ್ಗುಣಿ ನದಿಯ ನೀರಿನ ಸಮಸ್ಯೆಯ ಬಗ್ಗೆ "ವಾರ್ತಾಭಾರತಿ"ಯು ಎ. 3ರಂದು ವಿಶೇಷ ವರದಿಯನ್ನು ಪ್ರಕಟಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News