ಚುನಾವಣೆ ತರಬೇತಿಗೆ ಗೈರು: 18 ಮಂದಿಗೆ ಶೋಕಾಸ್ ನೋಟೀಸ್
Update: 2019-04-03 19:30 IST
ಉಡುಪಿ, ಎ.3: ಲೋಕಸಭಾ ಚುನಾವಣೆ-2019ರ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಮಾ.31ರಂದು ಮೊದಲ ಹಂತದ ತರಬೇತಿಯನ್ನು ವಿಧಾನಸಭಾ ಕ್ಷೇತ್ರವಾರು ಕೈಗೊಂಡಿದ್ದು, ಈ ತರಬೇತಿಯಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮೋದನೆ ಪಡೆಯದೇ ಗೈರುಹಾಜರಾಗಿ ಗಂಭೀರ ಕರ್ತವ್ಯ ಲೋಪವೆಸಗಿರುವ 18 ಮಂದಿ ಅಧಿಕಾರಿಗಳಿಗೆ ಪ್ರಜಾಪ್ರಾತಿನಿದ್ಯ ಕಾಯ್ದೆಯನ್ವಯ ಶಿಸ್ತುಕ್ರಮ ಜರಗಿಸಲು ಜಿಲ್ಲಾಧಿಕಾರಿಗಳು ನೋಟೀಸು ಜಾರಿಗೊಳಿಸಿದ್ದಾರೆ.
ನೋಟೀಸ್ ಜಾರಿಯಾದ 24 ಗಂಟೆಯೊಳಗೆ ಸಂಬಂಧಿಸಿದ ಅಧಿಕಾರಿಗಳು ಲಿಖಿತ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.