×
Ad

ಉಡುಪಿ: ಯೋಗದೀಪಿಕಾ ವಿದ್ಯಾಪೀಠದ ಘಟಿಕೋತ್ಸವ

Update: 2019-04-03 20:53 IST

ಉಡುಪಿ, ಎ.3: ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪಡುಬಿದ್ರಿ ಸಮೀಪದ ಪಲಿಮಾರಿನಲ್ಲಿ ನಡೆಯುತ್ತಿರುವ ಯೋಗದೀಪಿಕಾ ವಿದ್ಯಾಪೀಠದ 7 ಮಂದಿ ವಿದ್ಯಾರ್ಥಿಗಳ ಯಜರ್ವೇದ ಮಂಗಲವು ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಮಂಗಲಾಚರಣೆಯೊಂದಿಗೆ ನಡೆಯಿತು.

ಅನಂತರ ಮಧ್ವ ಮಂಟಪದಲ್ಲಿ ವಿದ್ಯಾಪೀಠದ 30ನೇ ಘಟಿಕೋತ್ಸವವು ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಪಲಿಮಾರುಶ್ರೀಗಳು, ವೇದಗಳು ಭಗವಂತನಿಗೆ ಪ್ರಿಯವಾಗಿದ್ದು, ದೇವರ ಆರಾಧನೆಗೆ ಮಾಧ್ಯಮ ವಾಗಿವೆ. ಹೀಗಾಗಿ ವೈದಿಕರಿಗೆ ಸಮಾಜದ ಸಹಕಾರ ಅಗತ್ಯ. ವೇದ ಕಲಿಸಿ ಕೊಡುವ ವಿದ್ಯಾಪೀಠಗಳ ಪೋಷಣೆಯೂಸಮಾಜದ ಜವಾಬ್ದಾರಿಯಾಗಿದೆ ಎಂದರು.

ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಕರಾವಳಿ ಜನರಲ್ಲಿ ಧಾರ್ಮಿಕ ಮನೋಭಾವ ಅಧಿಕವಾಗಿದೆ. ಹೀಗಾಗಿ ದೇವಾಲಯಗಳ ಜೀರ್ಣೋದ್ಧಾರ, ಪೂಜೆ, ಹೋಮಹವನಾದಿಗಳು ಹೆಚ್ಚು ನಡೆಯುತ್ತವೆ. ಇದಕ್ಕೆ ವಿದ್ವಾಂಸರ, ಪುರೋಹಿತರ ಅಗತ್ಯವಿದ್ದು, ಕೊರತೆಯನ್ನು ತುಂಬುವ ಕೆಲಸವನ್ನು ಯೋಗದೀಪಿಕಾ ವಿದ್ಯಾಪೀಠ ಮಾಡುತ್ತಿದೆ ಎಂದರು.

ಭಗವದ್ಗೀತೆಯ 18 ಅಧ್ಯಾಯಗಳನ್ನೂ ಕಂಠಪಾಠ ಮಾಡಿರುವ ಯೋಗದೀಪಿಕಾ ವಿದ್ಯಾರ್ಥಿ ಮಾಧವತೀರ್ಥ ಅವರನ್ನು ಪಲಿಮಾರು ಶ್ರೀಗಳು ಅಭಿನಂದಿಸಿದರು. ವಿದ್ಯಾಪೀಠದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾವರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News