ಮಿಥುನ್ ಅಶ್ವಮೇಧದ ಕುದುರೆಯನ್ನು ತಾಕತ್ತಿದ್ದರೆ ಕಟ್ಟಿ ಹಾಕಿ: ಅಭಯಚಂದ್ರ

Update: 2019-04-03 15:55 GMT

ಮೂಡುಬಿದಿರೆ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹೋರಾಟ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಹೊಸ ಪ್ರಯೋಗವಾಗಿದೆ. ಮೈತ್ರಿ ಅಭ್ಯರ್ಥಿ ಮಿಥುನ್ ರೈ ಎಂಬ ಅಶ್ವಮೇಧ ಕುದುರೆಯನ್ನು ಬಿಟ್ಟಿದ್ದೇವೆ. ತಾಕತ್ತಿದ್ದವರು ಕಟ್ಟಿಹಾಕಲಿ, ನೋಡೋಣ' ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಬುಧವಾರ ಸಮಾಜ ಮಂದಿರದಲ್ಲಿ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸವಾಲೆಸೆದಿದ್ದಾರೆ.

ಯುವನಾಯಕನನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದು ಪಕ್ಷದ ಇತಿಹಾಸದಲ್ಲೆ ಹೊಸ ಬೆಳವಣಿಗೆ. ಜಿಲ್ಲೆಯ ಸ್ವರ ಸಿಂಹದಂತೆ ದೆಹಲಿಯಲ್ಲಿ ಘರ್ಜಿಸಲಿದೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲೆ ಕಾಂಗ್ರೆಸ್ ಮುನ್ನಡೆ ಪಡೆದು ಜಯದ ಸಂಕೇತ ನೀಡಲಿದೆ. ಗೋಮಾತೆ ಬಿಜೆಪಿಯ ಸೊತ್ತಲ್ಲ. ಬಿಜೆಪಿಗರಿಂದ ಸಂಸ್ಕೃತಿ, ಸಂಸ್ಕಾರವನ್ನು ನಾವು ಕಲಿಯಬೇಕಾಗಿಲ್ಲ ಎಂದವರು ಹೇಳಿದರು. 

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ಯಾವುದೇ ಅಪಪ್ರಚಾರಕ್ಕೆ ಜಗ್ಗಲಾರೆ. ಈಜಿ ದಡ ಸೇರಬೇಕೆಂದು ಚುನಾವಣಾ ಅಖಾಡಕ್ಕಿಳಿದಿದ್ದೇನೆ. ನೀವು ನನ್ನನ್ನು ಮುಳುಗಲು ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಯುವಕರ ಅಶಾಕಿರಣವಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಭದ್ರ ಕೋಟೆಯನ್ನು ಒಡೆದು ಹೊಸ ಇತಿಹಾಸ ಸೃಷ್ಟಿಸುತ್ತೇನೆ ಎಂದರು.

ಜೆಡಿಎಸ್‍ನ ಹಿರಿಯ ಮುಖಂಡ ಅಮರನಾಥ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಜನಪರ ಆಡಳಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನೆರವಾಗಲಿದೆ. ಮಂಗಳೂರಿನ ಸಂಸದರು ಹೇಗೆ ಎಂದು ತಿಳಿದುಕೊಳ್ಳಲು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ನೋಡಿದರೆ ಸಾಕಾಗುತ್ತದೆ' ಎಂದರು. 

ವಿಜಯನಾಥ ವಿಠಲ ಶೆಟ್ಟಿಯವರು ಮಾತನಾಡಿ ಮಿಥುನ್ ಗೆದ್ದರೆ 'ಅಚ್ಚೇದಿನ್' ಬರಲಿದೆ ಎಂದರು. ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ `ಕಾಂಗ್ರೆಸ್ ಅನೇಕ ಬಿಲ್ಲವರಿಗೆ ಟಿಕೇಟ್ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯ ಸ್ಥಾನ ಮಾನ ನೀಡಿದರೆ, ಬಿಜೆಪಿ ಬಿಲ್ಲವ ಯುವಕರ ಕೈಗೆ ಕತ್ತಿ ಕೊಟ್ಟು ಪೆಟ್ಟು ಗಲಾಟೆ ಮಾಡಿಸಿ ಅವರನ್ನು ಬಳ್ಳಾರಿ ಜೈಲಿಗೆ ಕಳಿಸಿಕೊಡುತ್ತಿದೆ ಎಂದು ಆರೋಪಿಸಿದರು. ಯೋಧರ ಹೆಸರಲ್ಲಿ ಹೊಲಸು ರಾಜಕಾರಣ ಮಾಡುತ್ತಿದೆ ಎಂದವರು ಹೇಳಿದರು. 

ಇದೇ ವೇಳೆ ಕಿನ್ನಿಗೋಳಿ ಪರಿಸರದ 10 ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಜೆಡಿಎಸ್ ಮುಖಂಡರಾದ ಮುಹಮ್ಮದ್ ಕುಂಞಿ, ಎಂಬಿ. ಸದಾಶಿವ, ಸುಮತಿ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ವಿಜಯನಾಥ ವಿಠಲ ಶೆಟ್ಟಿ, ಸಂಪತ್ ಕುಮಾರ್, ವಸಂತ್ ಬರ್ನಾರ್ಡ್, ಧನಂಜಯ್ ಮಟ್ಟು, ಶಾಲೆಟ್ ಪಿಂಟೊ, ಸುಪ್ರಿಯಾ ಶೆಟ್ಟಿ, ರತ್ನಾಕರ ಸಿ. ಮೊಯಿಲಿ, ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.  

ಮಿಥುನ್ ರೈ ರೋಡ್‍ಶೋ: ಮಿಥುನ್ ರೈ, ಪೇಟೆಯಲ್ಲಿರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮೂಡುಬಿದಿರೆ ಚೌಟರ ಅರಮನೆಗೆ ಭೇಟಿ, ಕೋರ್ಪುಸ್ ಕ್ರಿಸ್ತಿ ಚರ್ಚ್, ಪೊನ್ನೆಚೇರಿ ದೇವಸ್ಥಾನ, ಇರುವೈಲು ದೇವಸ್ಥಾನ,ಜೈನಮಠಕ್ಕೆ, ಪುತ್ತಿಗೆ ಶ್ರೀಸೋಮನಾಥೇಶ್ವರ ದೇವಸ್ಥಾನ, ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News