ಮೀನುಗಾರರಿಗೆ ಶಾಶ್ವತ ಯೋಜನೆ ಜಾರಿಗೆ ಚಿಂತನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-04-03 16:54 GMT

ಕುಂದಾಪುರ, ಎ.3: ಮೀನುಗಾರ ಮಹಿಳೆಯರು, ಯುವಕರು ನಡೆಸುವ ಮೀನುಗಾರಿಕೆ ಕೂಡ ಕೃಷಿ ಆಗಿದೆ. ಆದುದರಿಂದ ಮೀನುಗಾರರಿಗೆ ಶಾಶ್ವತವಾದ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸಮ್ಮಿಶ್ರ ಸರಕಾರ ಈಗಾಗಲೇ ಚಿಂತನೆ ನಡೆಸಿದೆ ಎಂದು ರಾಜ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರವಾಗಿ ಕುಂದಾಪುರದ ನೆಹರು ಮೈದಾನದಲ್ಲಿ ಬುಧವಾರ ಆಯೋಜಿಸಲಾದ ಮಹಿಳಾ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿರುವ ಸರಕಾರಕ್ಕೆ ಮೀನುಗಾರರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ನೂರಾರು ಕೋಟಿ ರೂ. ಸಾಲ ದೊಡ್ಡ ಹೊರೆ ಆಗಲ್ಲ. ಈ ಬಗ್ಗೆ ಇಲ್ಲಿ ಘೋಷಣೆ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಚುನಾವಣೆಯ ನಂತರ ಒಂದು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಕೇವಲ ಮಾತಿನ ಭರವಸೆಯನ್ನು ಮಾತ್ರ ನೀಡಿದ್ದಾರೆಯೇ ಹೊರತು ಯುವಕರಿಗಾಗಿ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ. ಸೈನಿಕರ ಹೆಸರನ್ನು ದುರಪಯೋಗ ಪಡಿಸಿ, ಅವರ ಪ್ರಾಣದ ಜೊತೆ ಚೆಲ್ಲಾಟ ಆಡುವ ಏಕೈಕ ಪ್ರಧಾನಿ ಮೋದಿ. ಬಡವರ ಪರ ಒಂದೇ ಒಂದು ಕಾರ್ಯಕ್ರಮ ಅಥವಾ ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮಗಳನ್ನು ಇವರು ಮಾಡಿಲ್ಲ. ಆದರೂ ಯುವಕರು ಮೋದಿ ಮೋದಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಸಮ್ಮಿಶ್ರ ಸರಕಾರ ಆಡಳಿತ ಬಂದ ನಂತರ ಕರಾವಳಿ ಭಾಗದಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ಕಲ್ಪಿಸದೆ ಶಾಂತಿ ಹಾಗೂ ನೆಮ್ಮದಿ ವಾತಾವಾರಣವನ್ನು ನಿರ್ಮಾಣ ಮಾಡಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗೆ ಅವಕಾಶ ನೀಡಿ ಯುವಕರಿಗೆ ಉದ್ಯೋಗ ಕೊಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಾಮಾಲ ಮಾತನಾಡಿ, ಈ ಬಾರಿ ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಆಗಿದೆ. ಬಿಜೆಪಿ ಐದು ವರ್ಷಗಳ ಕಾಲ ಬರೀ ಸುಳ್ಳು ಹೇಳುತ್ತ ಬಂದಿದೆಯೆ ಹೊರತು ಯಾವುದೇ ಕೆಲಸ ಮಾಡಿಲ್ಲ. ಕೇಂದ್ರ ಸರಕಾರ ಐದು ವರ್ಷಗಳಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಯೋಜನೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ ಮಾತನಾಡಿದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್, ವಿಧಾನ ಪರಿಷತ್ ಸದಸ್ಯ ಬೋಜೆಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಮುಖಂಡರಾದ ಗೀತಾ ವಾಗ್ಳೆ, ದಿಲೇಶ್ ಶೆಟ್ಟಿ, ಬೊಸ್ಲಂ ಫರ್ನಾಂಡೀಸ್, ಶಾಲಿನಿ ಶೆಟ್ಟಿ ಕೆಂಚನೂರು, ಶಂಕರ್ ಕುಂದರ್, ಮಾಣಿ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಸರಕಾರದ ಜೊತೆ ಮಾತುಕತೆ
ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಈವರೆಗೆ ಸಾಧ್ಯವಾಗಿಲ್ಲ. ಈ ಬಗ್ಗೆ ರಕ್ಷಣಾ ಸಚಿವರ ಹಾಗೂ ಮಹಾರಾಷ್ಟ್ರ ಸರಕಾರದ ಜೊತೆ ನಿರಂತರ ಸಂಪರ್ಕ ನಡೆಸಿ, ಜೀವಂತವಾಗಿ ಪತ್ತೆ ಹಚ್ಚಲು ನಿರಂತರ ಶ್ರಮ ಪಟ್ಟಿದ್ದೇವೆ. ಆದರೆ ಈ ಕ್ಷಣದವರೆಗೆ ಅವರನ್ನು ಕರೆತರಲು ಸಾಧ್ಯವಾಗಿಲ್ಲ. ಈ ಮಧ್ಯೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಈ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಿದ್ದೇವೆ. ಕರ್ನಾಟಕದ ಮೀನುಗಾರರ ಮೇಲೆ ಮಹಾರಾಷ್ಟ್ರ ರಾಜ್ಯದ ಮೀನುಗಾರರು ನಡೆಸುವ ದಬ್ಬಾಳಿಕೆ ಬಗ್ಗೆ ಮಹಾರಾಷ್ಟ್ರ ಸರಕಾರದ ಜೊತೆ ಮಾತುಕತೆ ನಡೆಸಲಾಗುವುದು. ಈ ಮೂಲಕ ನಮ್ಮ ಮೀನುಗಾರರಿಗೆ ರಕ್ಷಣೆ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಸಿಎಂ ಎರಡುವರೆ ತಾಸು ವಿಳಂಬ!
ಸಂಜೆ ಐದು ಗಂಟೆ ಆರಂಭಗೊಂಡ ಮೀನುಗಾರ ಮಹಿಳಾ ಸಮಾವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡುವರೆ ತಾಸು ವಿಳಂಬವಾಗಿ ಆಗಮಿಸಿದರು.
ಮುಖ್ಯಮಂತ್ರಿಗೆ ಕಾದು ಸುಸ್ತಾದ ಕೆಲವು ಮೀನುಗಾರ ಮಹಿಳೆಯರು ಕತ್ತಲಾಗುತ್ತಿದ್ದಂತೆ ಸಮಾವೇಶದಿಂದ ತೆರಳಿದರು. ಆಗ ನಾಯಕರು ಸಮಾವೇಶ ಸ್ಥಳದಿಂದ ತೆರಳದಂತೆ ಮಹಿಳೆಯರಲ್ಲಿ ಮನವಿ ಮಾಡಿದರು.

ಸಂಜೆ 7:30ರ ಸುಮಾರಿಗೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ಮುಗಿಸಿ ಆಗಮಿಸಿದ ಸಿಎಂ ಎಲ್ಲರ ಕ್ಷಮೆ ಯಾಚಿಸಿದರು. ಕೊನೆಕ್ಷಣದವರೆಗೆ ಹೆಲಿಕಾಪ್ಟರ್ ಪಡೆಯಲು ಸಾಧ್ಯವಾಗದ ಕಾರಣ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಅಲ್ಲಿಂದ ಕುಂದಾಪುರಕ್ಕೆ ರಸ್ತೆಯ ಮೂಲಕವೆ ಪ್ರಯಾಣ ಮಾಡಬೇಕಾಯಿತು. ಹಾಗಾಗಿ ವಿಳಂಬವಾಯಿತು ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News