ಆರು ತಿಂಗಳಿನಿಂದ ಸಿಗದ ವೇತನ: ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

Update: 2019-04-04 07:20 GMT

ಮಂಗಳೂರು, ಎ.4: ಕಳೆದ ಆರು ತಿಂಗಳಿನಿಂದ ತಮಗೆ ವೇತನ ಸಿಗುತ್ತಿಲ್ಲ. ಕೇಳಿದರೆ ಮುಂದಿನ 15 ದಿನಗಳಲ್ಲಿ ವೇತನ ಸಿಗುತ್ತದೆ ಎಂದಷ್ಟೇ ಹೇಳಲಾಗುತ್ತಿದೆ. ವೇತನ ಇಲ್ಲದೆ ಮಾನಸಿಕ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ದ.ಕ. ಜಿಲ್ಲಾ ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರು ಹೇಳಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿರುವ ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಬ್ದುಸ್ಸಲಾಂ, ವೇತನ ಇಲ್ಲದೆ ಕಾರ್ಮಿಕರು ಸಾಲ ಪಡೆದು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಇದೀಗ ಸಾಲಗಾರರಿಂದಲೂ ಮಾನಸಿಕ ಕಿರುಕುಳವನ್ನು ಅನುಭವಿಸಬೇಕಾಗಿದೆ ಎಂದವರು ಹೇಳಿದರು.

ಸದ್ಯ ದಿನನಿತ್ಯದ ಖರ್ಚಿಗೆ ಹಣವಿಲ್ಲದೆ ಎಪ್ರಿಲ್ 1ರಿಂದ ಕೆಲಸಕ್ಕೆ ಗೈರು ಹಾಜರಾಗಿದ್ದೇವೆ. ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರೂ ಚುನಾವಣೆಯ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಮೂಲಕ ಮನವಿ ನೀಡುತ್ತಿದ್ದೇವೆ. ಒಟ್ಟು 693 ಕಾರ್ಮಿಕರು ಮತ್ತು ಅವರ ಕುಟುಂಬದವರು ಈ ಬಾರಿ ಮತದಾನವನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ಹಣದ ಕೊರತೆ, ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಸಮಸ್ಯೆ, ಕುಟುಂಬ ನಿರ್ವಹಣೆಗೂ ಪರದಾಡುವ ಪರಿಸ್ಥಿತಿ ತಮ್ಮದು ಎಂದು ಅವರು ಹೇಳಿದರು.

ಕಾರ್ಮಿಕರು ಗುತ್ತಿಗೆದಾರರಾದ ವಿಶಾಲ್ ಸೆಕ್ಯೂರಿಟಿ ಮಣ್ಣಗುಡ್ಡ ಹಾಗೂ ಆರ್ಮರ್ ಸೆಕ್ಯೂರಿಟಿ ಬೆಂಗಳೂರು ಅವರಡಿ ಕಾರ್ಯ ನಿರ್ವಹಿಸುತ್ತಿದ್ದು, ವೇತನದ ಬಗ್ಗೆ ವಿಚಾರಿಸಿದರೆ, ಬಿಎಸ್ಸೆನ್ನೆಲ್ ಸಂಸ್ಥೆಯಿಂದ ಹಣ ಬಾರದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸ್ಥಳೀಯ ಸಂಸದರು ಹಾಗೂ ಕಾರ್ಮಿಕ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆ ಬಾಡಿಗೆ ನೀಡಲು ಸಾಧ್ಯವಾಗದೆ ಮನೆಯಿಂದ ಹೊರ ಹಾಕುವ ಪರಿಸ್ಥಿತಿಯನ್ನೂ ಕೆಲವು ಕಾರ್ಮಿಕರು ಎದುರಿಸುತ್ತಿದ್ದಾರೆ. ವೇತನ ಕೇಳಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಧರ್, ಕೋಶಾಧಿಕಾರಿ ಜಗನ್ನಾಥ್, ಸುಬ್ರಹ್ಮಣ್ಯ ಭಟ್, ಸತೀಶ್ ಕೋಡಿಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News