ಅಮಿತ್ ಶಾ-ರಿಲಯನ್ಸ್ ವ್ಯವಹಾರದ ನಂಟು ನಾಮಪತ್ರದಿಂದ ಬಹಿರಂಗ

Update: 2019-04-06 16:12 GMT

ಹೊಸದಿಲ್ಲಿ, ಎ.6: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಬಾರಿ ಅಡ್ವಾಣಿಯವರ ಕ್ಷೇತ್ರ ಗಾಂಧಿನಗರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಾಮಪತ್ರ ಸಲ್ಲಿಸಿದ್ದು, 20 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ.

ಷೇರುಗಳು, ಮ್ಯೂಚುವಲ್ ಫಂಡ್, ಡಿಬೆಂಚರ್‍ ಗಳು ಸೇರಿದಂತೆ ಬಂಡವಾಳ ಮಾರುಕಟ್ಟೆಯಲ್ಲಿ ಅವರ ಹೂಡಿಕೆ 17.59 ಕೋಟಿ ರೂಪಾಯಿ. ಅವರ ಪತ್ನಿಯ ಹೂಡಿಕೆ 4.36 ಕೋಟಿ ರೂಪಾಯಿ ಆಗಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿದಾವಿತ್‍ ನಲ್ಲಿ ತಿಳಿಸಿದ್ದಾರೆ.

ಅಮಿತ್ ಶಾ ಅವರ ಅತಿದೊಡ್ಡ ಪ್ರಮಾಣದ ಹೂಡಿಕೆ ಇರುವುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ ನಲ್ಲಿ ಮತ್ತು ಟಿವಿ18 ಬ್ರಾಡ್‍ಕಾಸ್ಟ್ ಸಂಸ್ಥೆಯಲ್ಲಿ. ಎರಡೂ ಮುಕೇಶ್ ಅಂಬಾನಿ ನೇತೃತ್ವದ ಸಂಸ್ಥೆಗಳು. ಬಿಜೆಪಿ ಅಧ್ಯಕ್ಷ ಹಾಗೂ ಅವರ ಪತ್ನಿ ರಿಲಯನ್ಸ್ ಇಂಡಸ್ಟ್ರೀಸ್‍ನಲ್ಲಿ 2.08 ಕೋಟಿ ರೂಪಾಯಿ ಷೇರುಗಳನ್ನು ಹೊಂದಿದ್ದು, ಟಿವಿ18ನಲ್ಲಿ 24.22 ಲಕ್ಷ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಇವೆರಡನ್ನೂ ಸೇರಿಸಿದರೆ ಶಾ ಅವರ ಷೇರು ಮಾರುಕಟ್ಟೆ ಹೂಡಿಕೆಯ ಶೇಕಡ 10ರಷ್ಟಾಗುತ್ತದೆ.

ಇದರ ಜತೆಗೆ ಗ್ರಾಹಕ ಸರಕು ಉತ್ಪಾದನಾ ವಲಯದಲ್ಲಿ ಇಬ್ಬರೂ 1.25 ಕೋಟಿ ಮೌಲ್ಯದ ಷೇರನ್ನು ಪ್ರಾಕ್ಟರ್ ಅಂಡ್ ಗ್ಯಾಂಬಲ್‍ನಲ್ಲಿ ಹೊಂದಿದ್ದಾರೆ. ಕೋಲ್ಗೇಟ್-ಪಾಮೋಲಿವ್ (ಇಂಡಿಯಾ ಲಿಮಿಟೆಡ್), ಹಿಂದೂಸ್ತಾನ್ ಯುನಿಲಿವರ್ ಮತ್ತು ಐಟಿಸಿಯಲ್ಲೂ ಷಾ ಹೂಡಿಕೆ ಮಾಡಿದ್ದಾರೆ. ಮಾರ್ಚ್ 22ರವರೆಗೆ ಎಫ್‍ಎಂಜಿಸಿ ವಲಯದಲ್ಲಿ 4.26 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಲಿಸ್ಟೆಡ್ ಸೆಕ್ಯುರಿಟಿಗಳಲ್ಲಿ ಶೇಕಡ 20ರಷ್ಟು ಹಣವನ್ನು ಶಾ ಹೂಡಿಕೆ ಮಾಡಿದ್ದಾರೆ. ವಾಹನ ಕ್ಷೇತ್ರದಲ್ಲೂ ಹೂಡಿಕೆ ಮಾಡಿರುವ ಬಿಜೆಪಿ ಅಧ್ಯಕ್ಷ 2.8 ಕೋಟಿ ರೂಪಾಯಿಯನ್ನು ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್, ರಾಣೆ ಎಂಜಿನ್ ವಾಲ್ವ್ ಲಿಮಿಟೆಡ್, ಎಂಆರ್‍ಎಫ್ ಲಿಮಿಟೆಡ್ ಮತ್ತು ಬಜಾಜ್ ಆಟೊ ಲಿಮಿಟೆಡ್‍ನಲ್ಲಿ ಹೂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News