×
Ad

ಚುನಾವಣಾ ಕರ್ತವ್ಯಕ್ಕೆ ಅಡ್ಡಿ: ಗೋವಿಂದರಾಜ ಹೆಗ್ಡೆ ಬಂಧನ

Update: 2019-04-06 22:03 IST

ಬ್ರಹ್ಮಾವರ, ಎ.6: ಕಳೆದ ಮಾ.26ರಂದು ರಾತ್ರಿ ಬ್ರಹ್ಮಾವರ ಸಮೀಪದ ಸಾಬರಕಟ್ಟೆಯ ಬಾರೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವ ಫ್ಲೈಯಿಂಗ್ ಸ್ಕ್ವಾಡ್ 3ಕ್ಕೆ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಗೋವಿಂದರಾಜ್ ಹೆಗ್ಡೆ ಅವರನ್ನು ಬ್ರಹ್ಮಾವರದ ಪೊಲೀಸರು ಇಂದು ಹಾಸನ ಜಿಲ್ಲೆಯ ಸಕಲೇಶಪುರ ದಲ್ಲಿ ಬಂಧಿಸಿದ್ದಾರೆ.

ಸಾಬರಕಟ್ಟೆಯ ಸ್ವಾಗತ್ ಬಾರ್‌ನಲ್ಲಿ ರಸೀದಿ ರಹಿತವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್-3 ಮಧು ಎನ್.ಎಂ. ನೇತೃತ್ವದಲ್ಲಿ ರಾತ್ರಿ 8:35ರ ಸುಮಾರಿಗೆ ದಾಳಿ ನಡೆಸಿ ವಿಚಾರಣೆ ಮಾಡುತಿದ್ದಾಗ, ಬಾರ್ ಮಾಲಕರ ಕರೆಯಂತೆ ಸ್ಥಳಕ್ಕೆ ಧಾವಿಸಿ ಬಂದ ಗೋವಿಂದರಾಜ್ ಹೆಗ್ಡೆ, ತಂಡದ ಕರ್ತವ್ಯ ನಿರ್ವಹಣೆ ಅಡ್ಡಿಪಡಿಸಿದ್ದಲ್ಲದೇ ಬೆದರಿಸುವ ರೀತಿಯಲ್ಲಿ ಮಾತನಾಡಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾಗಿ ಹೆಗ್ಡೆ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಬ್ರಹ್ಮಾವರ ಪೊಲೀಸರು ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಗೋವಿಂದರಾಜ್ ಹೆಗ್ಡೆ ಅವರನ್ನು ಸಕಲೇಶಪುರದಲ್ಲಿ ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಅಲ್ಲಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News