×
Ad

ಕ್ರಿಕೆಟ್ ಬೆಟ್ಟಿಂಗ್: ಆರೋಪಿಯ ಬಂಧನ

Update: 2019-04-06 22:04 IST

ಮಂಗಳೂರು, ಎ.6: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಯನ್ನು ನಗರದ ಬಿಜೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಿಜೈ ನಿವಾಸಿ ಇರ್ವಿನ್ ಜೆರಾಲ್ಡ್ ಡಿಸೋಜ ಬಂಧಿತ ಆರೋಪಿ. ಆರೋಪಿಯಿಂದ ಮೂರು ಮೊಬೈಲ್, ಲ್ಯಾಪ್‌ಟಾಪ್‌ನ್ನು ವಶಕ್ಕೆ ಪಡೆಯಲಾಗಿದೆ.

ಎ.4ರಂದು ಉರ್ವ ಠಾಣಾ ಸರಹದ್ದಿನ ಬಿಜೈ ನ್ಯೂ ರೋಡ್ 4ನೇ ತಿರುವು ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಪ್ಲಾಟ್ ನಂಬರ್ 3ರಲ್ಲಿ ಇರ್ವಿನ್ ಜೆರಾಲ್ಡ್ ಡಿಸೋಜ ಎಂಬವರು ವಿವಿಧ ಹೆಸರಿನ ಮೊಬೈಲ್ ಆ್ಯಪ್‌ಗಳ ಮೂಲಕ ಸನ್‌ರೈಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ರಿಕೆಟರ್ಸ್ ಮಧ್ಯೆ ನಡೆಯುತ್ತಿದ್ದ ಐಪಿಎಲ್ ಟಿ-20 ಪಂದ್ಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು.

ಆರೋಪಿಯು ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಉರ್ವ ಠಾಣಾ ಪೊಲೀಸ್ ನಿರೀಕ್ಷಕರು ಸ್ಥಳಕ್ಕೆ ದಾಳಿ ನಡೆಸಿ, ಸೊತ್ತು ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

ಆರೋಪಿಯು ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಉಪಯೋಗಿಸುತ್ತಿದ್ದ ಮೂರು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಹಾಗೂ ಸಾರ್ಜನಿಕರಿಂದ ಅಕ್ರಮ ಬೆಟ್ಟಿಂಗ್ ದಂಧೆಗೆ ಸಂಗ್ರಹಿಸಿದ್ದ 1,450 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಒಟ್ಟು ಸೊತ್ತುಗಳ ಮೌಲ್ಯ 36,450 ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗ ದರ್ಶನದಂತೆ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುಪ್ರಸಾದ್ ಎ., ಪೊಲೀಸ್ ಉಪನಿರೀಕ್ಷಕಿ ವನಜಾಕ್ಷಿ ಕೆ., ಪ್ರೊಬೇಷನರಿ ಪಿಎಸ್ಸೈ ಹರೋನ್ ಅಖ್ತರ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News