×
Ad

ಮಂಗಳೂರಿಗೆ ಮೋದಿ ಕೊಡುಗೆಯೇನು? ವಿಮಾನ ನಿಲ್ದಾಣ ಖಾಸಗೀಕರಣವೇ? ವಿಜಯ ಬ್ಯಾಂಕ್ ವಿಲೀನವೇ?: ಕುಮಾರಸ್ವಾಮಿ ಪ್ರಶ್ನೆ

Update: 2019-04-07 11:31 IST

ಮಂಗಳೂರು, ಎ.7: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ನೀಡಿರುವ ಕೊಡುಗೆಗಳೇನು? ಮೋದಿ ಮುಖ ನೋಡಿ ಮತ ಹಾಕುವುದಾದರೆ ಮಂಗಳೂರಿಗೆ ಅವರು ನೀಡಿರುವ ಕೊಡುಗೆಯಾದರೂ ಏನು? ಅವರು ಮಂಗಳೂರಿಗೆ ಬಂದು ಅದೇನು ಸಂದೇಶ ನೀಡುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರಕ್ಕಾಗಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಬಂದಿಳಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ನಳಿನ್ ಕುಮಾರ್ ಕಟೀಲು ಮುಖ ನೋಡಿ ಮುಖ ಹಾಕಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಮೋದಿ ಕರ್ನಾಟಕಕ್ಕೆ ಬಿಡಿ, ಮಂಗಳೂರಿಗೆ ನೀಡಿರುವ ಕೊಡುಗೆಯಾದರೂ ಏನು? ದ.ಕ. ಜಿಲ್ಲೆಗೆ ಪೂರಕವಾದ ಸಂಸ್ಥೆಗಳನ್ನು ಮುಚ್ಚಿಕೊಂಡು ಬಂದಿದ್ದಾರೆ. ಲಾಭದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿಯವರ ಕೈಗೆ ಕೊಟ್ಟಿದ್ದಾರೆ. ಲಾಭದಲ್ಲಿದ್ದ ವಿಜಯ ಬ್ಯಾಂಕ್ ಅನ್ನು ಗುಜರಾತ್‌ನ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡಿದರು. ಇದಕ್ಕಾಗಿ ಮೋದಿಗೆ ವೋಟ್ ಹಾಕಬೇಕಾ? ಇದು ಮಂಗಳೂರಿನ ಜನರ ಸ್ವಾಭಿಮಾನದ ಪ್ರಶ್ನೆ ಎಂದವರು ಹೇಳಿದ್ದಾರೆ.

ಮೋದಿ ಮಂಗಳೂರಿಗೆ ಆಗಮಿಸುವ ಎ.13ರಂದೇ ರಾಹುಲ್ ಗಾಂಧಿ ಮಂಗಳೂರಿಗೆ ಬರುವವರಿದ್ದರು. ಆದರೆ, ಇದೀಗ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು, ಒಂದೆರಡು ದಿನಗಳ ಹೆಚ್ಚು ಕಡಿಮೆ ಮಾಡಲಾಗಿದೆ ಎಂದರು.

ಮಂಗಳೂರು, ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ನಾನು ಸಚಿವರಾದ ಯು.ಟಿ.ಖಾದರ್ ಹಾಗೂ ಡಾ.ಜಯಾಮಾಲಾ ಹಾಗೂ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಸಿದ್ದು, ಉತ್ತಮ ಅಭಿಪ್ರಾಯ ದೊರಕಿದೆ ಎಂದರು.

ಈ ಸಂದರ್ಭ ಸಚಿವ ಯು.ಟಿ.ಖಾದರ್, ಡಾ.ಜಯಮಾಲಾ ಮತ್ತಿತರರು ಜೊತೆಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News