×
Ad

''ಅಶ್ರಫ್ ಕಲಾಯಿ ಕುಟುಂಬಕ್ಕೆ ಸರಕಾರದ 5 ಲಕ್ಷ ರೂ. ದೊರಕಿಸಿಕೊಡಲು ಯು.ಟಿ.ಖಾದರ್ ಪ್ರಮುಖ ಕಾರಣ''

Update: 2019-04-07 16:15 IST
ಅಶ್ರಫ್ ಕಲಾಯಿ

ಮಂಗಳೂರು, ಎ.7: ಸುಮಾರು ಎರಡು ವರ್ಷಗಳ ಹಿಂದೆ ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಅವರ ಹತ್ಯೆ ಪ್ರಕರಣ ಇದೀಗ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಎಸ್‌ಡಿಪಿಐ ಹೊರತುಪಡಿಸಿ ಬೇರೇ ಯಾವುದೇ ರಾಜಕೀಯ ಪಕ್ಷಗಳು ನಮ್ಮ ಕುಟುಂಬಕ್ಕೆ ನೆರವಾಗಲು ಬಂದಿಲ್ಲ ಎಂದು ಅಶ್ರಫ್ ಕಲಾಯಿವರ ಪತ್ನಿ ಹೇಳಿದ್ದರೆನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಸರಕಾರದಿಂದ ಅಶ್ರಫ್ ಕಲಾಯಿ ಕುಟುಂಬಕ್ಕೆ ಐದು ಲಕ್ಷ ರೂ. ಲಭಿಸಿದೆ. ಇದರ ಹಿಂದೆ ಸಚಿವ ಯು.ಟಿ.ಖಾದರ್ ಅವರ ಅಪಾರ ಶ್ರಮ ಇತ್ತು ಎಂದು ಆ ಸಂದರ್ಭ ಪ್ರತ್ಯಕ್ಷದರ್ಶಿಯಾಗಿದ್ದರೆನ್ನಲಾದ ಹಕೀಂ ಕಲಾಯಿ ಎಂಬವರ ದೂರವಾಣಿ ಸಂಭಾಷಣೆಯೊಂದು ಇದೀಗ ವೈರಲ್ ಆಗಿದೆ.

ಅಶ್ರಫ್ ಕಲಾಯಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಲಭಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿ ಎನ್ನಲಾದ ಹಕೀಂ ಕಲಾಯಿ ಹೇಳುವಂತೆ, 5 ಲಕ್ಷ ರೂ. ಪರಿಹಾರದ ಮೊತ್ತ ಸರಕಾರದಿಂದ ಸಿಗುವಲ್ಲಿ ಸಚಿವ ಯು.ಟಿ.ಖಾದರ್ ಅವರ ಅಪಾರ ಶ್ರಮ ಇತ್ತು. ಪರಿಹಾರದ ಮೊತ್ತ ಮಂಜೂರಾಗಿದ್ದರೂ ಅದನ್ನು ಪಡೆಯುವಲ್ಲಿ ಅಶ್ರಫ್ ಕಲಾಯಿ ಕುಟುಂಬ ವಿಳಂಬ ಮಾಡಿತ್ತು. ಈ ವೇಳೆ ಅದು ಲ್ಯಾಪ್ಸ್ ಆಗುವ ಮಾಹಿತಿ ಪಡೆದ ಸಚಿವ ಖಾದರ್ ಆ ನಿಟ್ಟಿನಲ್ಲೂ ಕಾರ್ಯಪ್ರವತ್ತರಾಗಿದ್ದರು. ಮೂರು ದಿನಗಳ ಒಳಗೆ ಪರಿಹಾರದ ಹಣ ಪಡೆಯಲು ಮುಂದಾಗುವಂತೆ ಅಶ್ರಫ್ ಅವರ ಕುಟುಂಬಕ್ಕೆ ಸೂಚಿಸಿದ್ದರು. ಮಂಜೂರಾದ ಹಣವನ್ನು ಅಶ್ರಫ್ ಕಲಾಯಿ ಅವರ ಪತ್ನಿ ಮತ್ತು ತಾಯಿ ನಡುವೆ ಹಂಚುವ ವಿಚಾರದಲ್ಲೂ ಗೊಂದಲ ಉಂಟಾಗಿತ್ತು. ಈ ಸಂದರ್ಭವೂ ಸಚಿವ ಖಾದರ್ ಮಧ್ಯಪ್ರವೇಶಿಸಿದ್ದರು. ಬಳಿಕ ಖಾದರ್ ಅವರ ಸೂಚನೆಯಂತೆ ಸಚಿವ ರಮಾನಾಥ ರೈಯವರ ಬಳಿ ಹೋದಾಗ ರೈ ಅದನ್ನು ಅಶ್ರಫ್ ಕಲಾಯಿ ಪತ್ನಿ 3 ಲಕ್ಷ ರೂ. ಹಾಗೂ ಅಶ್ರಫ್ ಅವರ ತಾಯಿಗೆ 2 ಲಕ್ಷ ರೂ. ಆಗಿ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದರು. ಮಲ್ಲೂರು ಗ್ರಾಪಂ ಅಧ್ಯಕ್ಷ ಯೂಸುಫ್ ಅವರು ಕೂಡಾ ಈ ಬಗ್ಗೆ ಪಂಚಾಯಿತಿಗೆ ನಡೆಸಿದ್ದರು. ಅಶ್ರಫ್ ಅವರ ಪತ್ನಿ ಇದಕ್ಕೆ ಸಮ್ಮತಿಸಿದ್ದರು ಎಂದು ಹಕೀಂ ಕಲಾಯಿ ಅಂದಿನ ಆ ಪ್ರಕರಣವನ್ನು ಆಡಿಯೋದಲ್ಲಿ ವಿವರಿಸುತ್ತಾರೆ.

ಅಶ್ರಫ್ ಕಲಾಯಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಅಡ್ಯಾರಿಗೆ ಆಗಮಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎಸ್‌ಡಿಪಿಐ ನಿಯೋಗವು ಶಾಸಕ ಮೊಯ್ದಿನ್ ಬಾವ ನೇತೃತ್ವದಲ್ಲಿ ಮನವಿಯನ್ನೇನೋ ಸಲ್ಲಿಸಿತ್ತು. ಆದರೆ ಈ ಅರ್ಜಿ ಮುಂದುವರಿದಿರಲಿಲ್ಲ. ಬಳಿಕ ಸಚಿವ ಖಾದರ್ ಅವರು ಮುತುವರ್ಜಿ ವಹಿಸಿ ಅಶ್ರಫ್ ಕಲಾಯಿ ಕುಟುಂಬಕ್ಕೆ ಹಾಗೂ ಬಿ.ಸಿ.ರೋಡಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಮಡಿವಾಳ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಮಂಜೂರಾಗುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಅಗತ್ಯ ಕ್ರಮಗಳನ್ನು ಯು.ಟಿ.ಖಾದರ್ ಕೈಗೊಂಡಿದ್ದರು ಎಂದು ಹಕೀಂ ಕಲಾಯಿ ಹೇಳುತ್ತಾರೆ.

ಅಶ್ರಫ್ ಕಲಾಯಿ ಕುಟುಂಬಕ್ಕೆ ಎಸ್‌ಡಿಪಿಐ ಸಹಾಯ ಮಾಡಿದ್ದೇನೋ ನಿಜ. ಆದರೆ ಸರಕಾರದಿಂದ ನೆರವು ಲಭಿಸುವಲ್ಲಿ ಯಾರೂ ಶ್ರಮಿಸಿಲ್ಲ ಎಂಬುದು ಸುಳ್ಳು. ಸಚಿವ ಯು.ಟಿ.ಖಾದರ್ ಅವರ ಪ್ರಯತ್ನದಿಂದಲೇ ಕಲಾಯಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಲಭಿಸಿದೆ ಎನ್ನುತ್ತದೆ ಹಕೀಂ ಕಲಾಯಿ ಅವರ ದೂರವಾಣಿ ಸಂಭಾಷಣೆಯ ತುಣುಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News