ಎಪ್ರಿಲ್ ನಲ್ಲಿ ನಮ್ಮ ಮೇಲೆ ಮತ್ತೊಂದು ದಾಳಿಗೆ ಭಾರತದಿಂದ ತಯಾರಿ: ಪಾಕ್ ಆರೋಪ

Update: 2019-04-07 17:45 GMT

ಇಸ್ಲಾಮಾಬಾದ್,ಎ.7: ಭಾರತವು ಎಪ್ರಿಲ್ 16ರಿಂದ 20ರ ನಡುವೆ ಪಾಕಿಸ್ತಾನದ ಮೇಲೆ ಇನ್ನೊಂದು ದಾಳಿಯನ್ನು ನಡೆಸಲು ಸಂಚು ಹೂಡಿದೆಯೆಂದು ಪಾಕ್ ವಿದೇಶಾಂಗ ಸಚಿವ ಶಾ ಮುಹಮ್ಮದ್ ಖುರೇಶಿ ರವಿವಾರ ಆರೋಪಿಸಿದ್ದಾರೆ.

ಮುಲ್ತಾನ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖುರೇಷಿ, ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಭಾರತವು ಹೊಸ ಯೋಜನೆಯನ್ನು ರೂಪಿಸುತ್ತಿರುವ ಬಗ್ಗೆ ತನ್ನ ಸರಕಾರಕ್ಕೆ ವಿಶ್ವಸನೀಯ ಬೇಹುಗಾರಿಕಾ ಮಾಹಿತಿ ಲಭಿಸಿದೆ''ಎಂದು ಹೇಳಿದರು.

 '' ಪಾಕಿಸ್ತಾನದ ವಿರುದ್ಧ ಮತ್ತೊಂದು ದಾಳಿ ನಡೆಯುವ ಸಾಧ್ಯತೆಗಳಿವೆ. ಇದಕ್ಕಾಗಿ (ಭಾರತದಿಂದ) ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಎಪ್ರಿಲ್ 16ರಿಂದ20ರೊಳಗೆ ಈ ದಾಳಿ ನಡೆಯಬಹುದಾಗಿದೆ'' ಎಂದು ಖುರೇಷಿ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.

''ಹೊಸ 'ಅವಘಡ' ವನ್ನು ನಡೆಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಅವರ (ಭಾರತದ) ಆಕ್ರಮಣವನ್ನು ಸಮರ್ಥಿಸುವುದು ಹಾಗೂ ಇಸ್ಲಾಮಾಬಾದ್ ವಿರುದ್ಧ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ''ಎಂದವರು ಆರೋಪಿಸಿದರು.

ಒಂದು ವೇಳೆ ಹಾಗೆ ಸಂಭವಿಸಿದಲ್ಲಿ, ಅದರಿಂದ ಪ್ರದೇಶದ ಶಾಂತಿ ಹಾಗೂ ಸ್ಥಿರತೆಯ ಮೇಲೆ ಉಂಟಾಗುವ ಪರಿಣಾಮವನ್ನು ನೀವು ಕಲ್ಪಿಸಬಹುದಾಗಿದೆ ''ಎಂದರು.

ಈ ವಿಷಯವನ್ನು ಪಾಕಿಸ್ತಾನವು ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಿಗೆ ವಿವರಿಸಿದೆ ಹಾಗೂ ತನ್ನ ಆತಂಕವನ್ನು ವ್ಯಕ್ತಪಡಿಸಿದೆಯೆಂದು ಖುರೈಷಿ ಹೇಳಿದರು.

''ಈ ಬೇಜವಾಬ್ದಾರಿ ವರ್ತನೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಗಮನಹರಿಸಬೇಕು ಹಾಗೂ ಈ ಮಾರ್ಗದಲ್ಲಿ ನಡೆಯುತ್ತಿರುವುದಕ್ಕಾಗಿ ಅವರಿಗೆ (ಭಾರತಕ್ಕೆ) ಎಚ್ಚರಿಕೆ ನೀಡಬೇಕು'' ಎಂದು ಖುರೇಷಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News