×
Ad

ಮತಗಟ್ಟೆಗೆ ಗಣ್ಯ ವ್ಯಕ್ತಿಗಳು ಬಂದರೂ ನಿಯಮ ಉಲ್ಲಂಘನೆ ಸಲ್ಲ: ಡಿಸಿ ಕೊರ್ಲಪಾಟಿ

Update: 2019-04-07 18:44 IST

ಉಡುಪಿ, ಎ.7: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಎ.18ರಂದು ನಡೆಯಲಿದ್ದು ಈ ವೇಳೆ ಮತಗಟ್ಟೆಗೆ ಯಾವುದೇ ಗಣ್ಯ ವ್ಯಕ್ತಿಗಳು ಮತದಾನಕ್ಕೆ ಬಂದರೂ ನಿಯಮಗಳನ್ನು ಉಲ್ಲಂಘಿಸಬಾರದು. ಹಾಗೆಯೇ ಅಂಗವಿಕಲ ಮತದಾರರಿಗೆ ಎಲ್ಲಾ ರೀತಿಯ ಸೂಕ್ತ ನೆರವು ನೀಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಚುನಾವಣಾದಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತಗಟ್ಟೆಯ ನಿಯೋಜಿತ ಸಿಬ್ಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ನಗರದ ಸೈಂಟ್ ಸಿಸಿಲಿ ಶಾಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ರವಿವಾರ ಏರ್ಪಡಿಸಲಾದ ತರಬೇತಿ ಕಾರ್ಯಕ್ರಮವನ್ನು ವೀಕ್ಷಿಸಿ ಅವರು ಮಾತನಾಡುತಿದ್ದರು. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸ್ಥಳೀಯ ಗ್ರಾಪಂಗಳಲ್ಲಿ ಊಟ ಸಿದ್ಧಪಡಿಸಿ, ಮತಗಟ್ಟೆಗಳಿಗೆ ಸರಬರಾಜು ಮಾಡಲಾಗುವುದು ಎಂದೂ ಅವರು ಹೇಳಿದರು.

ಸುಗಮ ಚುನಾವಣೆಗಾಗಿ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಎಲ್ಲ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಚುನಾವಣಾ ಸಿಬ್ಬಂದಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ತೊಂದರೆಯಾಗದಂತೆ ಎಲ್ಲಾ ಸೂಕ್ತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೂಕ್ತ ಸೌಲಭ್ಯಗಳನ್ನು ಸಿಬ್ಬಂದಿಳಿಗೆ ಒದಗಿಸಲಾಗುವುದು ಎಂದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರಕ್ಕೆ ಬರಲು ಮತ್ತು ಡಿಮಸ್ಟರಿಂಗ್ ನಂತರ ತೆರಳಲು ಸೂಕ್ತ ವಾಹನ ವ್ಯವಸ್ಥೆ ಮಾಡ ಲಾಗುವುದು. ಡಿಮಸ್ಟರಿಂಗ್ ಸಮಯದಲ್ಲಿ ಮತಕೇಂದ್ರದಲ್ಲಿ ಕಾರ್ಯ ನಿರ್ವ ಹಿಸುವ ಎಲ್ಲಾ ಸಿಬ್ಬಂದಿ ಹಾಜರಿ ಕಡ್ಡಾಯವಾಗಿದ್ದು, ಡಿಮಸ್ಟರಿಂಗ್ ಸಮಯ ದಲ್ಲಿ ಹಾಜರಾತಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮತ ಚಲಾಯಿಸಲು ಎಪಿಕ್ ಕಾರ್ಡ್ ಪರಿಗಣಿಸುವಂತೆ ಮತ್ತು ಎಪಿಕ್ ಕಾರ್ಡ್ ಇಲ್ಲವಾದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಅಗತ್ಯ ದಾಖಲೆ ಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ವೋಟರ್ ಸ್ಲಿಪ್ ಅನ್ನು ಮತದಾನಕ್ಕೆ ದಾಖಲೆ ಎಂದು ಪರಿಗಣಿಸಬಾರದು ಎಂದು ಅವರು ತರಬೇತಿ ನಿರತ ಸಿಬ್ಬಂದಿಗೆ ತಿಳಿಸಿದರು.

ಕೆಲವು ಕಡೆಗಳಲ್ಲಿ ಮುಚ್ಚಿದ್ದ ಶಾಲೆಗಳನ್ನು ಚುನಾವಣಾ ಮತಗಟ್ಟೆಗಾಗಿ ಮತ್ತೆ ತೆರೆದಿದ್ದು, ಇಂತಹ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಈವರೆಗೆ 100ಕ್ಕೂ ಅಧಿಕ ಮತಗಟ್ಟೆ ಇರುವ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಅಗತ್ಯವಿರುವ ದುರಸ್ತಿಗೆ ಸೂಚಿಸಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ಮತ ಚಲಾವಣೆಯ ಗೌಪ್ಯತೆಯನ್ನು ಕಾಪಾಡಬೇಕು. ಮತಯಂತ್ರದ ಬಳಿ ಮತದಾರರನ್ನು ಬಿಟ್ಟು ಇತರೆ ಯಾರಿಗೂ ಅವಕಾಶ ನೀಡಬಾರದು. ಮತಗಟ್ಟೆಯಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಕೂಡಲೇ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News