×
Ad

ಎಂಆರ್‌ಪಿಎಲ್ ವಿಸ್ತರಣೆ ಕೈಬಿಡುವಂತೆ ಮುಖ್ಯಮಂತ್ರಿಗೆ ಪೇಜಾವರ ಶ್ರೀ ಮನವಿ

Update: 2019-04-07 20:26 IST

ಉಡುಪಿ, ಎ.7: ಉಡುಪಿ ಪೇಜಾವರ ಮಠಕ್ಕೆ ಇಂದು ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಮಂಗಳೂರಿನ ಎಂಆರ್‌ಪಿಎಲ್ ವಿಸ್ತರಣೆಗೆ ಅವಕಾಶ ನೀಡದಂತೆ ಮನವಿ ಮಾಡಿದರು.

ಮಂಗಳೂರಿನ ಪೇರ್ಮುದೆ, ಕಳವಾರು ಪ್ರದೇಶ ಹೇರಳ ಕೃಷಿ ಪ್ರದೇಶ ವಾಗಿದ್ದು, ಯಾವುದೇ ಕಾರಣಕ್ಕೂ ಎಂಆರ್‌ಪಿಎಲ್ ವಿಸ್ತರಣೆಗೆ ಈ 1060 ಎಕರೆ ಕೃಷಿ ಪ್ರದೇಶವನ್ನು ಒದಗಿಸಬಾರದು. ರೈತ ಪರ ಕಾಳಜಿಯುಳ್ಳ ಮುಖ್ಯ ಮಂತ್ರಿಯಾಗಿರುವ ನೀವು ಈ ಬಗ್ಗೆ ಗಮನ ಹರಿಬೇಕು ಎಂದು ಸ್ವಾಮೀಜಿ ತಿಳಿಸಿದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆಂಗಳೂರು, ಮೈಸೂರು ಹೊರವಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗೋಶಾಲೆಗೆ 50 ಎಕರೆ ನೀರಾವರಿ ಸೌಲಭ್ಯ ಹೊಂದಿರುವ ಭೂಮಿಯನ್ನು ಒದಗಿಸಲು ಸಹಕರಿಸ ಬೇಕು. ಬೆಂಗಳೂರು ಮರ್ದನಹಳ್ಳಿಯಲ್ಲಿ ಸುಮಾರು 25 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಗೆ ಸರಕಾರದಿಂದ ಸಹಾಯ ಮಾಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಚುನಾವಣೆ ಮುಗಿದ ಬಳಿಕ ಭೇಟಿ ಮಾಡಿ ಈ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿ ದರು. ಈ ಸಂದರ್ಭದಲ್ಲಿ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News