ಬಿಜೆಪಿ ಸರ್ವಾಧಿಕಾರಿ ಪಕ್ಷ: ಯು.ಬಸವರಾಜ್

Update: 2019-04-07 15:14 GMT

ಬೈಂದೂರು, ಎ.7: ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿ ಸುಳ್ಳುಗಳನ್ನು ಹೇಳಿಯೇ ಅಧಿಕಾರಕ್ಕೆ ಬಂದು 5 ವರ್ಷ ಸರ್ವಾಧಿಕಾರಿ ಆಡಳಿತವನ್ನು ನಡೆಸಿದೆ. ತನ್ನ ಅಧಿಕಾರದ ಅವಧಿಯಲ್ಲಿ ಜಾತಿವಾದ, ಕೋಮು ವಾದ, ಧರ್ಮಾಂಧತೆಯನ್ನು ಬೆಳೆಸಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕಾಂ.ಯು.ಬಸವರಾಜ ಹೇಳಿದ್ದಾರೆ.

ಸಿಪಿಐ(ಎಂ) ಪಕ್ಷದ ಬೈಂದೂರು ವಲಯ ಸಮಿತಿ ಆಶ್ರಯದಲ್ಲಿ ಬೈಂದೂರು ರೋಟರಿ ಭವನದಲ್ಲಿ ರವಿವಾರ ಆಯೋಜಿಸಲಾದ ರಾಜಕೀಯ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಿಜೆಪಿಯು ಜಾತ್ಯಾತೀತತೆ ಬಗ್ಗೆ ಮಾತಾಡುವವರನ್ನು ದೇಶದ್ರೋಹಿಗಳು ಎಂಬುದಾಗಿ ವ್ಯವಸ್ಥಿತವಾಗಿ ಚಿತ್ರಿಸುತ್ತಿದೆ. ಇದರ ಪರಿಣಾಮ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ದಲಿತರ, ಅಲ್ಪಸಂಖ್ಯಾಕರ, ಮಹಿಳೆಯರ ಮೇಲೆ ದೌರ್ಜನ್ಯ, ಕೊಲೆಗಳು ಹೆಚ್ಚಳ ಕಂಡಿವೆ. ಕೇಂದ್ರದ ನೀತಿಗಳು ಇಂದು ದೇಶದ ಮತ್ತು ವಿದೇಶದ ದೊಡ್ಡ ಬಂಡವಾಳಗಾರರ ಪರವಾಗಿದೆ. ಸರಕಾರದ ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚಿ ಬಂಡವಾಳಗಾರರಿಗೆ ಮಾರಾಟ ಮಾಡುವುದು ಬಿಜೆಪಿಯ ದೇಶಪ್ರೇಮವಾಗಿದೆ ಎಂದು ಅವರು ಟೀಕಿಸಿದರು.

ದೇಶದ ಜನರ ತಲಾ ಆದಾಯ ಕುಸಿತಗೊಂಡು ಕೆಲವೇ ಶ್ರೀಮಂತರ ಆದಾಯ ಹೆಚ್ಚಳವಾಗಿರುವುದೇ ಬಿಜೆಪಿಯ ಐದು ವರ್ಷಗಳ ಆಡಳಿತದ ದೊಡ್ಡ ಸಾಧನೆಯಾಗಿದೆ. ಅಸಂಘಟಿತ ಕಾರ್ಮಿಕರ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಾನೂನು ತಿದ್ದುಪಡಿ ಮಾಡಿಸಿ ಸೌಲಭ್ಯ ಕಸಿದುಕೊಳ್ಳುತ್ತಿರುವುದು ಕಾರ್ಮಿಕ ವರ್ಗಕ್ಕೆ ಮಾಡುವ ವಂಚನೆ ಎಂದು ಅವರು ಆರೋಪಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯ ಕಾರ್ಮಿಕರಿಗೆ ಹಲವಾರು ತಿಂಗಳಿಂದ ವೇತನ ನೀಡದೇ ಅವರ ಕುಟುಂಬಗಳನ್ನು ಬೀದಿಗೆ ತಳ್ಳಿ ಅದರ ಆದಾಯ ಗಳನ್ನು ಖಾಸಗೀ ಬಂಡವಾಳಗಾರರ ಕುಟುಂಬಕ್ಕೆ ನೀಡಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರವೇ ಅಡಗಿದೆ ಎಂದು ಅವರು ದೂರಿದರು.

ರಾಜ್ಯ ಮುಖಂಡ ಕೆ.ಶಂಕರ್ ಮಾತನಾಡಿದರು. ಬೈಂದೂರು ವಲಯ ಮುಖಂಡ ರಾಜೀವ ಪಡುಕೋಣಿ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ನಾಡ, ಗಣೇಶ ಮೊಗವೀರ, ಶ್ರೀಧರ್, ರೊನಾಲ್ಡ್ ರಾಜೇಶ್, ಉದಯ ಮೊಗೇರಿ, ವಿಜಯ, ಅಮ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ತೊಂಡೆಮಕ್ಕಿ ವಂದಿಸಿದರು. ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News