ಜಾತಿ ತಾರತಮ್ಯ: ಸಿವಿಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ

Update: 2019-04-07 17:40 GMT

ಹೊಸದಿಲ್ಲಿ, ಎ. 7: ಐಎಎಸ್ ಅಧಿಕಾರಿ ವಿರುದ್ಧ ‘ಜಾತಿ ತಾರತಮ್ಯ’ ಮಾಡಿದ್ದಾರೆನ್ನಲಾದ ಕೇಂದ್ರ ವಿಚಕ್ಷಣಾ ಆಯುಕ್ತ (ಸಿವಿಸಿ) ಕೆ.ವಿ. ಚೌಧರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕತೆ ಪ್ರದರ್ಶಿಸಬೇಕು ಎಂದು ಹೋರಾಟಗಾರ, ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.

 ‘ಜಾತಿ ತಾರತಮ್ಯ’ದ ಸಂಬಂಧ ಜಗನ್ಮೋಹನ್ ಸಿಂಗ್ ರಾಜು ಅವರ ನ್ಯಾಯವಾದಿ ಪ್ರಶಾಂತ್ ಭೂಷಣ್ ಪ್ರಧಾನಿ ಮಂತ್ರಿ ಕಚೇರಿಗೆ ಎಪ್ರಿಲ್ 2ರಂದು ನೋಟಿಸು ರವಾನಿಸಿದ್ದಾರೆ.

ಚೌಧರಿ ಅವರು ಕೈಗೊಂಡ ಕ್ರಮದಿಂದಾಗಿ ತಮಿಳುನಾಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಜಗನ್ಮೋಹನ್ ಸಿಂಗ್ ರಾಜು ಭಡ್ತಿಯಿಂದ ವಂಚಿತರಾಗಿ ದ್ದಾರೆ ಎಂದು ಭೂಷಣ್ ಆರೋಪಿಸಿದ್ದಾರೆ.

2015 ಜೂನ್‌ನಲ್ಲಿ ಭ್ರಷ್ಟಾಚಾರದ ಆರೋಪದಿಂದ ಮುಕ್ತರಾಗಿದ್ದರೂ ಚೌಧರಿ ಅವರು ರಾಜು ವಿರುದ್ಧ ಹೊಸ ತನಿಖೆಗೆ ಸ್ವಯಂಪ್ರೇರಿತರಾಗಿ ಆದೇಶಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಎರಡನೇ ಬಾರಿ ತನಿಖೆ ನಡೆಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, 2016 ಆಗಸ್ಟ್ 8ರಂದು ರಾಜು ಅವರಿಗೆ ಮತ್ತೆ ಕ್ಲೀನ್ ಚಿಟ್ ನೀಡಿತ್ತು. ಆದಾಗ್ಯೂ, ಚೌಧರಿ ಅವರು ತನಿಖಾ ಕಡತವನ್ನು ಬಾಕಿ ಇರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜು ಅವರು ಕೆ.ವಿ. ಚೌಧರಿ ಅವರಿಂದ ಜಾತಿವಾದಿ, ಪ್ರತೀಕಾರದ ಕಿರುಕುಳಕ್ಕೆ ಒಳಗಾಗಿದ್ದಾರೆ. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಹಾಗೂ ಸಾಮಾಜಿಕ ನ್ಯಾಯ ಸಚಿವಾಲಯದ ಶಿಫಾರಸನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಉಸ್ತುವಾರಿ ಹೊಂದಿರುವ ಪ್ರಧಾನಿ ಅವರ ವ್ಯಾಪ್ತಿಯಲ್ಲಿ ಬರುವ ಸಿಬ್ಬಂದಿ ತರಬೇತಿ ಇಲಾಖೆಯ ಕಿರುಕುಳಕ್ಕೆ ಅವರು ಒಳಗಾಗಿದ್ದಾರೆ ಎಂದು ನೋಟಿಸ್‌ನಲ್ಲಿ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

33 ವರ್ಷಗಳಿಂದ ಕಳಂಕರಹಿತ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ರಾಜು ಅವರನ್ನು ಬಲಿಪಶು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಹಾಗೂ ಸಿಬ್ಬಂದಿ ತರಬೇತಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಶಾಂತ್ ಭೂಷಣ್ ಪ್ರಧಾನಿ ಮಂತ್ರಿ ಕಚೇರಿ (ಪಿಎಂಒ)ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News