ಒಂದರ ಬದಲು 5 ವಿವಿಪ್ಯಾಟ್ ಗಳನ್ನು ಪರಿಶೀಲಿಸಿ: ಚು.ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Update: 2019-04-08 15:14 GMT

ಹೊಸದಿಲ್ಲಿ, ಎ.8: ಮುಂಬರುವ ಚುನಾವಣೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಇವಿಎಂ ಬದಲು ಐದು ಇವಿಎಂ ಯಂತ್ರಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ತಾಳೆ ಹಾಕಲಾಗುವ ವಿದ್ಯುನ್ಮಾನ ಮತಯಂತ್ರಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುವುದು. ಐದು ಇವಿಎಂಗಳ ವಿವಿಪ್ಯಾಟ್ ಚೀಟಿಗಳ ಎಣಿಕೆ ಪದ್ಧತಿಯು ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಂತ ಹೆಚ್ಚಿನ ನಿಖರತೆ ಮತ್ತು ತೃಪ್ತಿಯನ್ನು ಖಚಿತಗೊಳಿಸಲಿದೆ ಎಂದು ನ್ಯಾಯಾಲಯವು ಹೇಳಿತು.

ಇವಿಎಂ ವ್ಯವಸ್ಥೆಯು ನಿಖರ ಫಲಿತಾಂಶಗಳನ್ನು ನೀಡಬಹುದು ಎನ್ನುವುದನ್ನು ನಾವು ಶಂಕಿಸುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು, ಆದರೆ ತಾಳೆ ಹಾಕುವ ಚೀಟಿಗಳ ಸಂಖ್ಯೆ ಹೆಚ್ಚಿದರೆ ಅದು ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಇದಕ್ಕಾಗಿ ಕಾರ್ಯಸಾಧ್ಯ ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಕಂಡುಕೊಳ್ಳುವುದು ನಮ್ಮ ಪ್ರಯತ್ನವಾಗಿದೆ ಎಂದರು.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಕ್ಷಣದಿಂದಲೇ ಜಾರಿಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಚುನಾವಣಾ ಆಯೋಗವು ತಿಳಿಸಿತು.

 ಚುನಾವಣಾ ಆಯೋಗವು ಸದ್ಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಇವಿಎಂ ನಿಯಮದಡಿ 4,125 ವಿದ್ಯುನ್ಮಾನ ಮತಯಂತ್ರಗಳ ವಿವಿಪ್ಯಾಟ್ ಚೀಟಿಗಳನ್ನು ತಾಳೆ ಹಾಕುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅದು ಈಗ 20,625 ಇವಿಎಂಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕಾಗುತ್ತದೆ.

ವಿವಿಪ್ಯಾಟ್ ಯಂತ್ರಗಳನ್ನು ಬಳಸಿ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಕನಿಷ್ಠ ಶೇ.50ರಷ್ಟು ಮತಗಳನ್ನು ತಾಳೆ ಹಾಕುವಂತೆ ಕೋರಿ ಕಾಂಗ್ರೆಸ್, ಟಿಡಿಪಿ, ಎನ್‌ಸಿಪಿ, ಸಿಪಿಎಂ, ಆಪ್ ಸೇರಿದಂತೆ 21 ಪ್ರತಿಪಕ್ಷಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News